ಹೊನ್ನಾವರ: ಕಾರ್ಮಿಕ ಇಲಾಖೆಯ ವಿವಿಧ ಬೇಡಿಕೆ ಈಡೇರಿಕೆಗಾಗಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣದ ಕಾರ್ಮಿಕರ ಫೆಡರೇಷನ್ ವತಿಯಿಂದ ಪಟ್ಟಣದ ಶರಾವತಿ ವೃತ್ತದಲ್ಲಿ ಜಮಾವಣೆಗೊಂಡ ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕಾರ್ಮಿಕರಿಗೆ ನೀಡುವ ಫುಡ್ ಕಿಟ್, ಟೂಲ್ ಕಿಟ್, ಇನ್ನಿತರೆ ಕಿಟ್ ನೀಡುವ ಜೊತೆಗೆ ಕರೊನ ಸಂದರ್ಭದಲ್ಲಿ ಕಾರ್ಮಿಕರ ಖಾತೆಗೆ ಹಣ ಹಾಕುವಾಗ ಕಲ್ಯಾಣ ಮಂಡಳಿಯಲ್ಲಿ ನಡೆದ ಭ್ರಷ್ಟಾಚಾರದ ಸೂಕ್ತ ತನಿಖೆ ನಡೆಸಬೇಕು. ಕೊರೋನಾ ಸಂದರ್ಭದಲ್ಲಿ ಸರ್ಕಾರ ನೀಡಿದ 8 ಸಾವಿರ ರೂ. ಜಮೆ ಆಗದ ಕಾರ್ಮಿಕರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ ವಂಚತರಾದ ಕಾರ್ಮಿಕರ ಖಾತೆಗೆ ಕೂಡಲೆ ಹಣ ಜಮಾ ಮಾಡಬೇಕು. ಕಾರ್ಮಿಕರ ಮಕ್ಕಳಿಗೆ ಹಾಕಿದ ಶೈಕ್ಷಣಿಕ ಧನ ಸಹಾಯದಲ್ಲಿ 42,000 ಮಕ್ಕಳಿಗೆ ಇನ್ನು ಜಮೆ ಆಗದೇ ಇರುದರಿಂದ ತಕ್ಷಣ ಹಣ ಜಮಾ ಮಾಡಬೇಕು. ಪ್ರಸಕ್ತ ಸಾಲಿನ ಶೈಕ್ಷಣಿಕ ಧನ ಸಹಾಯಕ್ಕೆ ಆನ್‌ಲೈನ್ ಮೂಲಕ ಅರ್ಜಿ ಹಾಕಲು ಅವಕಾಶ ಕಲ್ಪಿಸಬೇಕು. ವಸತಿ ಯೋಜನೆಯಡಿ ನಿಜವಾದ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ನೀಡುವ ಧನಸಹಾಯವನ್ನು ತಕ್ಷಣ ನೀಡಬೇಕು. ತಾಲೂಕು ಕಾರ್ಮಿಕ ಇಲಾಖೆಯಲ್ಲಿ ಹಚ್ಚುವರಿಯಾಗಿ ಡಿಓಗಳನ್ನು ನೇಮಿಸಬೇಕು. ತಾಲೂಕು ಮಟ್ಟದ ಸಮಸ್ಯೆ ಬಗೆಹರಿಸಲು ತಹಶೀಲ್ದಾರ ನೇತೃತ್ವದಲ್ಲಿ ಸಭೆ ನಡೆಸುವ ಜೊತೆ ಇಲಾಖೆಯ 19 ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಮನವಿಯನ್ನು ಗ್ರೇಡ್ 2 ತಹಶೀಲ್ದಾರ ಉಷಾ ಪಾವಸ್ಕರ್ ಸ್ವೀಕರಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಶಾಂತರಾಮ ನಾಯಕ ಮಾತನಾಡಿ, ಕಾರ್ಮಿಕ ಇಲಾಖೆ ಭ್ರಷ್ಟ್ಟಾಚಾರದ ಕೂಪವಾಗಿದೆ. ಕಾರ್ಮಿಕರ ಮಕ್ಕಳಿಗೆ ನೀಡಲಾಗುವ ಶೈಕ್ಷಣಿಕ ಸೌಲಭ್ಯಗಳ ಅರ್ಜಿ ಸ್ವೀಕಾರ ಈ ಬಾರಿ ಇದುವರೆಗೂ ಆರಂಭವಾಗಿಲ್ಲ. ಕಳೆದ ಬಾರಿ ಸಲ್ಲಿಕೆಯಾದ ಅರ್ಜಿಗೆ ಸರಿಯಾಗಿ ಹಣ ಬಿಡುಗಡೆಯಾಗಿಲ್ಲ. ಕಾರ್ಮಿಕರಿಗೆ ಸಿಗುವ ಸೌಲಭ್ಯ ಸಮರ್ಪಕವಾಗಿ ಸಿಗುತ್ತಿಲ್ಲ. ಬೇಡಿಕೆ ಈಡೇರದೆ ಹೊದಲ್ಲಿ ಜ.22 ರಂದು ಬೆಂಗಳೂರಿನಲ್ಲಿ ಬೃಹತ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಜಿಲ್ಲಾ ಕಾರ್ಯದರ್ಶಿ ತಿಲಕ ಗೌಡ, ಕಾರ್ಮಿಕ ಇಲಾಖೆ ಸೌಲಭ್ಯಗಳ ಬಗ್ಗೆ ಪ್ರಚಾರ ಮಾಡುತ್ತಾರೆ. ಯಾವುದೇ ಸೌಲಭ್ಯ ಸಮರ್ಪಕವಾಗಿ ದೊರೆಯುತ್ತಿಲ್ಲ. ಕಾರ್ಮಿಕ ಇಲಾಖೆ ಹಾಗೂ ಕಲ್ಯಾಣ ಮಂಡಳಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ನೀಡಲಾದ 40% ಬಸ್ ಪಾಸ್ ನೈಜ ಕಾರ್ಮಿಕರಿಗೆ ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ತಿಮ್ಮಪ್ಪ ಗೌಡ, ತಾಲೂಕ ಕಾರ್ಯದರ್ಶಿ ಮಂಜುನಾಥ ಗೌಡ, ಸಂಘಟನೆಯ ಸದಸ್ಯರಾದ ಪುಂಡಲೀಕ ನಾಯ್ಕ, ಭಾರತಿ ಗೌಡ, ಗಣೇಶ್ ಮುಕ್ರಿ, ಸವಿತಾ ದೇವಳಿ, ಸುಶೀಲಾ ನಾಯ್ಕ ಮತ್ತಿತರರು ಇದ್ದರು.