ಕಾರವಾರ: ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ಜಾತಿ/ ವರ್ಗಗಳ ಕಲ್ಯಾಣ ಇಲಾಖೆಗಳ ವತಿಯಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ(ಕ್ರೈಸ್) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ 24 ಮೊರಾರ್ಜಿ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ/ ಡಾ.ಬಿ.ಆರ್.ಅಂಬೇಡ್ಕರ್/ ಶ್ರೀಮತಿ ಇಂದಿರಾಗಾoಧಿ/ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಲ್ಲಿ 2023- 24ನೇ ಸಾಲಿಗೆ 6ನೇ ತರಗತಿ ಸೇರ್ಪಡೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರವೇಶ ಪರೀಕ್ಷೆ ನಡೆಸಲಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಅವಧಿ ಜ.05ರಿಂದ ಪ್ರಾರಂಭಗೊಳ್ಳಲಿದ್ದು, ಜ.22 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಮಾ.12ರಂದು ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಎಸ್‌ಎಟಿಎಸ್ ಸಂಖ್ಯೆ (ವಿದ್ಯಾರ್ಥಿಯ ಬಹುತೇಕ ಪ್ರಮುಖ ಮಾಹಿತಿಗಳು ಎಸ್‌ಎಟಿಎಸ್‌ನಿಂದ ಫೆಚ್ ಆಗುವದರಿಂದ ಎಸ್‌ಟಿಎಸ್‌ನಲ್ಲಿ ವಿದ್ಯಾರ್ಥಿಯ ಸಂಪೂರ್ಣ ಮಾಹಿತಿ ಅಪ್‌ಡೇಟ್ ಇರಬೇಕು), ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಅರ್ಜಿ ಸಲ್ಲಿಸುವ ದಿನಾಂಕದವರೆಗೂ ಚಾಲ್ತಿಯಲ್ಲಿರಬೇಕು), ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ- 2, ಇತರೆ ಮೀಸಲಾತಿ ಕೋರುವ ಪ್ರಮಾಣ ಪತ್ರಗಳನ್ನ ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಸಲ್ಲಿಸಬೇಕು.
ಅರ್ಜಿಯನ್ನು ಸಮೀಪದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಯಲ್ಲಿಯೇ ಆನ್‌ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಪ್ರವೇಶ ಬಯಸುವ ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ (ಜಿಲ್ಲೆಯ ಎಲ್ಲ ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳುವುದು- ನಮೂನೆಗಾಗಿ ಹತ್ತಿರದ ವಸತಿ ಶಾಲೆ ಸಂಪರ್ಕಿಸಬಹುದು). ಅಭ್ಯರ್ಥಿಯು ತನ್ನ ಸ್ವಂತ ಜಿಲ್ಲೆಯ ವಸತಿ ಶಾಲೆಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.
ಎಸ್‌ಎಟಿಎಸ್ ಯಾವುದೇ ನ್ಯೂನ್ಯತೆಯನ್ನು ನೇರವಾಗಿ ಮಾರ್ಪಾಡು ಮಾಡಲು ಅರ್ಜಿ ಹಾಕುವ ಸ್ಥಳದಲ್ಲಿ ಅವಕಾಶವಿರುವುದಿಲ್ಲ. ಹೆಚ್ಚಿನ ವಿವರಗಳಿಗಾಗಿ ಹತ್ತಿರದ ವಸತಿ ಶಾಲೆಗಳನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.