ಜೊಯಿಡಾ: ರಾಷ್ಟ್ರೀಯ ಆದಾಯ ಹೆಚ್ಚಾಗಲು ಅಣು ವಿದ್ಯುತ್ ಶಕ್ತಿ ಅತ್ಯವಶ್ಯವಾಗಿದ್ದು, ಪರಿಸರ ಸ್ನೇಹಿಯಾಗಿಯೆ ಅದು ಕೆಲಸ ಮಾಡುತ್ತಿರುತ್ತದೆ ಎಂಬುದನ್ನು ನಾವು ನೀವು ಅರಿತುಕೊಳ್ಳಬೇಕು ಎಂದು ಮುಂಬೈನ ಅಣುಶಕ್ತಿ ನಿಯಂತ್ರಣ ಮಂಡಳಿ ಅಧ್ಯಕ್ಷ ಜಿ.ನಾಗೇಶ್ವರ ರಾವ್ ಅಭಿಪ್ರಾಯಪಟ್ಟರು.
ತಾಲೂಕಿನ ಅಣಶಿ ಪ್ರೌಢಶಾಲೆಯ ನೂತನ ಸಮುದಾಯಭವನ, ಗ್ರಂಥಾಲಯ ಹಾಗೂ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಅವರು, ಕೈಗಾ ಅಣು ಶಕ್ತಿ ಘಟಕವು ತನ್ನ ಲಾಭಾಂಶದಲ್ಲಿ ಸ್ವಲ್ಪ ಪಾಲನ್ನು ಸಾಮಾಜಿಕ ಕೆಲಸ ಕಾರ್ಯದಲ್ಲಿ ತೊಡಗಿಸುತ್ತಿದೆ. ಅದರ ಸರಿಯಾದ ಬಳಕೆಗೆ ಜನರ ವಿಶ್ವಾಸಪೂರ್ಣತೆ ಬಹುಮುಖ್ಯ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಕೈಗಾದ ಸ್ಥಳ ನಿರ್ದೇಶಕ ಪಿ.ಜಿ.ರಾಯಚೂರ್ ಮಾತನಾಡಿ, ಸಿಎಸ್‌ಆರ್ ಸಮಿತಿ ಸದಾ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ. ಆರೋಗ್ಯ ಮತ್ತು ಮೂಲಭೂತ ಸೌಕರ್ಯ ಕೊರತೆ ನೀಗಿಸುವತ್ತ ಹೆಜ್ಜೆ ಹಾಕುತ್ತದೆ. ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ವೇದಿಕೆ ಮೇಲೆ ಬಿ.ವಿನೋದಕುಮಾರ, ವೈ.ಬಿ.ಭಟ್, ಆರ್.ಮನೋಹರ, ಬಿ.ಕೆ.ಚನ್ನಕೇಶವ, ವಿಜಯಲಕ್ಷ್ಮಿ ರಾವ್, ಸುವರ್ಣ ಗಾಂವಕಾರ, ಸುಮಂತ ಹೆಬ್ಳೀಕರ್, ಗ್ರಾ.ಪಂ ಅಧ್ಯಕ್ಷ ಅರುಣ ದೇವಳಿ ಇದ್ದರು. ವಿಷ್ಣು ಪಟಗಾರ ನಿರೂಪಿಸಿದರು. ವಿನೋದ ನಾಯಕ ಸ್ವಾಗತಿಸಿದರು. ಕೆ.ಆರ್.ನಾಯಕ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಣಶಿ ಊರಿನ ಸುತ್ತಮುತ್ತಲಿನ ಗ್ರಾಮಸ್ಥರು, ಪಾಲಕರು, ವಿವಿಧ ಇಲಾಖೆಯ ತಾಲೂಕಾಧಿಕಾರಿಗಳು ಹಾಜರಿದ್ದರು.