ಕುಮಟಾ: ಚಂದಾವರದ ಯುವ ಉತ್ಸಾಹಿ ಯುವ ಬಳಗದ ವತಿಯಿಂದ ಅಂತರರಾಜ್ಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯು ಡಿ.30ರಂದು ಚಂದಾವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾ ಮೈದಾನದಲ್ಲಿ ನಡೆಯಲಿದೆ ಎಂದು ಬಳಗದ ಪ್ರಮುಖರಾದ ಕಿರಣ ಬಾಡ್ಕರ್ ತಿಳಿಸಿದರು.
ಶಾಲೆಯ ಕ್ರೀಡಾ ಮೈದಾನದಲ್ಲಿ ವಾಲಿಬಾಲ್ ಪಂದ್ಯಾವಳಿಯ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿ, ಸರ್ವ ಧರ್ಮಿಯರು ಸೇರಿ ಸೌಹಾರ್ದ ಟ್ರೋಫಿ ಎಂಬ ಅಂತರ್ ರಾಜ್ಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಸಂಘಟಿಸಿದ್ದೇವೆ. ಕರ್ನಾಟಕ, ಕೇರಳ , ತಮಿಳುನಾಡಿನ ಒಟ್ಟು ಆರು ಬಲಾಢ್ಯ ತಂಡಗಳು ಈ ಪಂದ್ಯಾವಳಿಯಲ್ಲಿ ಸೆಣೆಸಲಿವೆ. ರಾಷ್ಟ್ರ ಮಟ್ಟದ ವಾಲಿಬಾಲ್ ಆಟಗಾರರು ಈ ಪಂದ್ಯಾವಳಿಯಲ್ಲಿ ಭಾಗವಹಿಸಿ ತಮ್ಮ ರೋಚಕ ಆಟದ ಪ್ರದರ್ಶನ ನೀಡಲಿದ್ದಾರೆ. ಪೂರ್ಣಚಂದ್ರ ಕ್ಯಾಶ್ಯೂ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ಡಿ.30ರ ಸಂಜೆ 6.30 ಗಂಟೆಗೆ ಆರಂಭವಾಗಲಿದೆ. ಎಲ್ಲ ಪಕ್ಷಗಳ ಮುಖಂಡರು, ಉದ್ಯಮಿಗಳು, ಗಣ್ಯರು ಸೇರಿ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಸುಮಾರು 15 ಸಾವಿರ ಜನರು ಸೇರಲು ವ್ಯವಸ್ಥೆ ಮಾಡಲಾಗಿದೆ. ಸುಮಾರು 5 ಸಾವಿರ ಜನರು ಕುಳಿತು ಪಂದ್ಯಾವಳಿ ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ ಮಾಡಿದ್ದೇವೆ. ಪಂಚಾಯತ್ ಆವರಣದಲ್ಲಿ ವಿವಿಧ ಫುಟ್ ಸ್ಟಾಲ್‌ಗಳ ವ್ಯವಸ್ಥೆ ಮಾಡಿದ್ದೇವೆ. ಚರ್ಚ ಬಳಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಮತ್ತು ಇತರೆ ಸಂಬಂಧಿತ ಇಲಾಖೆಗಳ ಸಹಕಾರದಲ್ಲಿ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಾರ್ವಜನಿಕರು, ಕ್ರೀಡಾಭಿಮಾನಿಗಳು ಸಂಪೂರ್ಣ ಸಹಕಾರ ನೀಡುವ ಮೂಲಕ ಪಂದ್ಯಾವಳಿಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಚಂದಾವರ ಗ್ರಾಪಂ ಸದಸ್ಯ ವಿನಯ ನಾಯ್ಕ ಮತ್ತು ಉದ್ಯಮಿ ಅಶ್ವಿನ್ ನಾಯ್ಕ ಕೂಜಳ್ಳಿ ಮಾತನಾಡಿ, ಎಲ್ಲ ಧರ್ಮಿಯರು ಸೇರಿ ಸೌಹಾರ್ದಯುತವಾಗಿ ಅಂತರ್ ರಾಜ್ಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಸಂಘಟಿಸಿದ್ದೇವೆ. ತಿಂಗಳುಗಳ ಕಾಲ ನಮ್ಮ ಬಳಗದವರು ಮತ್ತು ಯುವಕರೆಲ್ಲ ಸೇರಿ ಅಚ್ಚುಕಟ್ಟಾಗಿ ಪಂದ್ಯಾವಳಿ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಕ್ರೀಡಾ ಪ್ರೋತ್ಸಾಹಕರು ಮತ್ತು ಕ್ರೀಡಾಭಿಮಾನಿಗಳು ಪಂದ್ಯಾವಳಿಗೆ ತನು, ಮನ, ಧನದಿಂದ ಸಹಕಾರ ನೀಡುವ ಮೂಲಕ ಪಂದ್ಯಾವಳಿಯನ್ನು ಯಶಸ್ವಿಗೊಳಿಸುವ ಜೊತೆಗೆ ಪಂದ್ಯಾವಳಿಯನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಚಂದಾವರದ ಯುವ ಉತ್ಸಾಹಿ ಯುವ ಬಳಗದ ಅಧ್ಯಕ್ಷ ಚಂದ್ರಕಾoತ ಶಿವಪ್ಪ ನಾಯ್ಕ, ಗೌರವಾಧ್ಯಕ್ಷ ಸುರೇಶ ನಾಯ್ಕ, ಗ್ರಾಪಂ ಸದಸ್ಯ ಹನುಮಂತ ನಾಯ್ಕ, ಪ್ರಮುಖರಾದ ಇಮಾಮ್ ಸಾಬ್ ಗನಿ, ರಾಜೇಶ ಆಚಾರಿ, ನಾಗರಾಜ ನಾಯ್ಕ, ಕೃಷ್ಣ ಗೌಡ, ನಾಗಪ್ಪ ಗೌಡ, ಉಲ್ಲಾಸ ನಾಯ್ಕ, ಹರಿಶ್ಚಂದ್ರ ಗೌಡ, ನೀಲಕಂಠ ಭಟ್, ಶ್ರೀಕಾಂತ ಗೋನ್ಸಾಲಿಸ್, ಪ್ರಶಾಂತ ನಾಯ್ಕ, ಹಸನ್ ಸಾಬ್ ಹೆಮ್ಮಕ್ಕಿ, ಗಣೇಶ ಆಚಾರಿ, ವಿದ್ಯಾಧರ ನಾಯ್ಕ, ದಿನೇಶ ಗುನಗಾ ಇತರರು ಇದ್ದರು.