• Slide
    Slide
    Slide
    previous arrow
    next arrow
  • ಮೊಬೈಲ್ ಹ್ಯಾಕ್ ಮಾಡಿ ಮಹಿಳೆಯ ಚಾರಿತ್ರ್ಯಹರಣಕ್ಕೆ ಸಂಚು: ಹೊನ್ನಾವರದ ಹ್ಯಾಕರ್ ಪೋಲಿಸ್ ಬಲೆಗೆ

    300x250 AD

    ಹೊನ್ನಾವರ: ವಿವಾಹಿತ ಮಹಿಳೆಯ ಫೋಟೋಗಳನ್ನ ಎಡಿಟ್ ಮಾಡಿ ಆಕೆಯ ಸ್ನೇಹಿತರಿಗೆ ಕಳುಹಿಸುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದ ಹೊನ್ನಾವರ ಮೂಲದ ಹ್ಯಾಕರ್‌ನನ್ನು ಹರಿಯಾಣ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.
    ತಾಲೂಕಿನ ಚಂದಾವರ ಗ್ರಾಮದ ಇಮ್ದಾದ್ ಮುಲ್ಲಾನನ್ನ ಹರಿಯಾಣ ಪೊಲೀಸರು ಹೊನ್ನಾವರ ಪೊಲೀಸರ ಸಹಕಾರದಲ್ಲಿ ಆತನ ಮನೆಯಲ್ಲಿ ವಶಕ್ಕೆ ಪಡೆದಿದ್ದು, ಆತನಿಂದ ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಇನ್ನಿತರ ವಸ್ತುಗಳನ್ನ ಜಪ್ತಿಪಡಿಸಿಕೊಂಡು ತೆರಳಿದ್ದಾರೆ.
    ವೈಯಕ್ತಿಕ ದ್ವೇಷದಿಂದ ಅಮೆರಿಕಾ ಮೂಲದ ಮಹಿಳೆಯೋರ್ವಳು ಹರಿಯಾಣ ರಾಜ್ಯದ ಗುರುಗ್ರಾಮ ಮೂಲದ ವಿವಾಹಿತ ಮಹಿಳೆಯ ಚಾರಿತ್ರ್ಯ ಹಾಳು ಮಾಡಲು ಸಂಚು ಹೂಡಿದ್ದಳು ಎನ್ನಲಾಗಿದ್ದು, ಅದಕ್ಕಾಗಿ ಹ್ಯಾಕರ್‌ಗಳನ್ನ ಹುಡುಕುತ್ತಾ, ಅಪ್‌ವರ್ಕ್ ಡಾಟ್ ಕಾಮ್ ವೆಬ್‌ಸೈಟ್ ಮೂಲಕ ಇಮ್ದಾದ್ ಮುಲ್ಲಾನ ಸಂಪರ್ಕ ಮಾಡಿದ್ದಳು. ತಾನು ಸೂಚಿಸಿದ ಮಹಿಳೆಯ ಮೊಬೈಲನ್ನ ಹ್ಯಾಕ್ ಮಾಡಿ, ಆಕೆಯ ನಂಬರ್‌ನಿಂದ ಬೇರೆಯವರಿಗೆ ಆಕೆಯ ನಗ್ನ ವಿಡಿಯೋ ಹಾಗೂ ಫೋಟೋಗಳನ್ನ ಕಳುಹಿಸುವಂತೆ ಇಮ್ದಾಲ್ ಮುಲ್ಲಾನಿಗೆ ಸುಪಾರಿ ಕೊಟ್ಟಿದ್ದಳು ಎನ್ನಲಾಗಿದೆ. ಸುಪಾರಿ ಪಡೆದಿದ್ದ ಇಮ್ದಾದ್, ಮಹಿಳೆಯ ಮೊಬೈಲನ್ನ ಹ್ಯಾಕ್ ಮಾಡಿ, ಆಕೆಯ ಫೋಟೋಗಳನ್ನ ಮೊಬೈಲ್‌ನಿಂದ ಪಡೆದುಕೊಂಡಿದ್ದ.
    ಆಕೆಯ ಫೊಟೊವನ್ನ ಬೆತ್ತಲಿರುವಂತೆ ಎಡಿಟ್ ಮಾಡಿ, ಆಕೆಯ ಫೊಟೊಗಳನ್ನ ಬಳಸಿ ನಕಲಿ ಅಶ್ಲೀಲ ವಿಡಿಯೋಗಳನ್ನೂ ತಯಾರಿಸಿ, ಆಕೆಯ ನಂಬರ್‌ನಿಂದಲೇ ಆಕೆಯ ಸಂಪರ್ಕದಲ್ಲಿದ್ದ ಇತರೆ ನಂಬರ್‌ಗಳಿಗೆ ಪ್ರತಿನಿತ್ಯ ಬೆಳಿಗ್ಗೆ, ರಾತ್ರಿ ಫೋಟೋ ಹಾಗೂ ವಿಡಿಯೋಗಳನ್ನ ಕಳುಹಿಸುತ್ತಿದ್ದ. ವಿಷಯ ತಿಳಿದ ಮಹಿಳೆ ತನ್ನದೇ ನಂಬರ್‌ನಿಂದ ವಿಡಿಯೋ, ಫೋಟೋಗಳು ಶೇರ್ ಆಗುತ್ತಿರುವುದರಿಂದ ಗಾಬರಿಗೊಂಡು, ಮಾನಸಿಕ ಹಿಂಸೆಗೆ ಸಹ ಗುರಿಯಾಗಿದ್ದಳು. ಅಲ್ಲದೇ ಆಕೆಯ ಸಾಂಸಾರಿಕ ಜೀವನದಲ್ಲೂ ಸಾಕಷ್ಟು ಒಡಕಿಗೆ ಕಾರಣವಾಗಿತ್ತು. ಇದರಿಂದ ಬೇಸತ್ತ ಮಹಿಳೆ ಗುರುಗ್ರಾಮ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
    ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಹರಿಯಾಣ ಪೊಲೀಸರು, ಮೊಬೈಲ್ ಹ್ಯಾಕ್ ಆಗಿರುವ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸುತ್ತಿರುವಾಗ ಅಮೆರಿಕಾ ಮೂಲದ ಮಹಿಳೆಯ ಜೊತೆ ಫಿರ್ಯಾದಿಗೆ ವೈಯಕ್ತಿಕ ದ್ವೇಷವಿರುವುದು ತಿಳಿದು ಬಂದಿದೆ. ಬಳಿಕ ಹೆಚ್ಚಿನ ಮಾಹಿತಿ ಕಲೆ ಹಾಕಿದಾಗ ಪ್ರಕರಣದಲ್ಲಿ ಚಂದಾವರ ಮೂಲದ ಹ್ಯಾಕರ್‌ನ ಕೈವಾಡ ಇರುವ ಬಗ್ಗೆ ತಿಳಿದುಬಂದಿದ್ದು, ಈತನನ್ನ ಹೊನ್ನಾವರದಿಂದ ವಶಕ್ಕೆ ಪಡೆದು ಹರಿಯಾಣಕ್ಕೆ ಕರೆದೊಯ್ದು ಅಲ್ಲಿ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
    ಐಷಾರಾಮಿ ಜೀವನ
    ಆರೋಪಿತ ಇಮ್ದಾದ್ ಐಷಾರಾಮಿ ಜೀವನ ನಡೆಸುತ್ತಿದ್ದುದು ಇಡೀ ತಾಲೂಕಿನಲ್ಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಮಂಗಳೂರಿನ ಪ್ರತಿಷ್ಠಿತ ಎಂಜಿನಿಯರ್ ಕಾಲೇಜಿನಲ್ಲಿ 2017ರಲ್ಲಿ ಬಿ.ಇ ಕಂಪ್ಯೂಟರ್ ಸೈನ್ಸ್ ವಿದ್ಯಾಭ್ಯಾಸ ಮುಗಿಸಿದ ನಂತರ ಅಮೆರಿಕನ್ ಮೆಡಿಕಲ್ ಕೇರ್, ಜಸ್ಟ್ ಪೇ ಸೇರಿದಂತೆ ಹಲವು ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದ ಇಮ್ದಾದ್, ಯುಪಿಐ ಸಾಫ್ಟ್ವೇರ್ ಡೆವಲಪರ್ ಆಗಿ ಸಹ ಕೆಲಸ ಮಾಡಿದ್ದ.
    ನಂತರ ವಾಪಸ್ ಊರಿಗೆ ಬಂದು ಅಪ್‌ವರ್ಕ್ ಡಾಟ್ ಕಾಮ್‌ನಲ್ಲಿ ಎಥಿಕಲ್ ಹ್ಯಾಕರ್ ಆಗಿ ಸೇರಿಕೊಂಡಿದ್ದ. ಈತನ ಬಳಿ ಐಷಾರಾಮಿ ಬಿ.ಎಂ.ಡಬ್ಲ್ಯೂ ಕಾರು, ಬಿ.ಎಂ.ಡಬ್ಲ್ಯೂ ಬೈಕ್‌ಗಳೂ ಇದ್ದು, ಭಾರೀ ಶೋಕಿ ಮಾಡಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದ. ಪೊಲೀಸರು ಕೆಲ ದಿನದ ಹಿಂದೆ ಈತನ ಆದಾಯದ ಮೂಲದ ಬಗ್ಗೆ ವಿಚಾರಣೆ ನಡೆಸಲು ಮುಂದಾಗಿದ್ದರು ಎನ್ನಲಾಗಿದೆ.


    ಗಂಟೆಗೆ 50 ಸಾವಿರ…!!!
    ಆರೋಪಿತ ಇಮ್ದಾದ್, ಹ್ಯಾಕಿಂಗ್ ಕೆಲಸಕ್ಕಾಗಿ ಗಂಟೆಗೆ 50 ಸಾವಿರ ರೂಪಾಯಿ ಪಡೆಯುತ್ತಿದ್ದ ಎನ್ನಲಾಗಿದೆ. ಹರಿಯಾಣ ಮೂಲದ ಮಹಿಳೆಯ ಮೊಬೈಲ್ ಹ್ಯಾಕ್ ಮಾಡಲು ಸಹ ಅಮೆರಿಕಾ ಮೂಲದ ಮಹಿಳೆಯಿಂದ ಲಕ್ಷಾಂತರ ರೂಪಾಯಿ ಪಡೆದಿದ್ದ ಎನ್ನುವ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ.

    300x250 AD

    ಹರಿಯಾಣ ಪೊಲೀಸರಿಗೆ ಪಿಐ ಶ್ರೀಧರ್ ನೆರವು
    ಮೊಬೈಲ್ ಹ್ಯಾಕರ್ ಇಮ್ದಾದ್ ವಶಕ್ಕೆ ಪಡೆಯಲು ಹೊನ್ನಾವರ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಧರ್ ಎಸ್.ಆರ್. ಮುಖ್ಯವಾಗಿ ಸಹಕಾರಿಯಾದರು. ಹರಿಯಾಣದಿಂದ ಬಂದ ಪೊಲೀಸರು ಶ್ರೀಧರ್ ಅವರ ಬಳಿ ಮಾಹಿತಿ ನೀಡಿದ್ದು, ಆತನನ್ನ ವಶಕ್ಕೆ ಪಡೆಯಲು ಕಾರ್ಯತಂತ್ರವನ್ನ ಶ್ರೀಧರ್ ನೇತೃತ್ವದಲ್ಲಿ ಮಾಡಲಾಗಿತ್ತು ಎನ್ನಲಾಗಿದೆ. ವಿಷಯ ತಿಳಿದರೆ ಮನೆಗೆ ತೆರಳುವ ಮುನ್ನವೇ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ನಲ್ಲಿರುವ ಡೇಟಾಗಳನ್ನ ಆರೋಪಿ ಡಿಲೀಟ್ ಮಾಡಬಹುದಾಗಿದ್ದರಿಂದ ವ್ಯವಸ್ಥಿತವಾಗಿ ಆತನ ಮನೆಯ ಸುತ್ತಲೂ ಪೊಲೀಸ್ ಸರ್ಪಗಾವಲನ್ನು ಹಾಕಿ, ಹರಿಯಾಣ ಹಾಗೂ ಹೊನ್ನಾವರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಮ್ದಾದ್‌ನನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top