ಹೊನ್ನಾವರ: ಶಾಲೆಗೆ ವಿದ್ಯಾರ್ಥಿಗಳು ಆಗಮಿಸಿದರೂ ಶಿಕ್ಷಕರು ಬಾರದ ಘಟನೆ ತಾಲೂಕಿನ ಕೇಶವಪಾಲ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಜರುಗಿದೆ.
ಸಾಲ್ಕೋಡ್ ಗ್ರಾ.ಪಂ. ವ್ಯಾಪ್ತಿಯ ಕೇಶವಪಾಲ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದವರು ಎರಡು ದಿನದಿಂದ ರಜೆಯಲ್ಲಿದ್ದ ಕಾರಣ ಗುರುವಾರ ಸಮೀಪದ ಶಾಲಾ ಶಿಕ್ಷಕಿಯೋರ್ವರನ್ನು ನಿಯೋಜನೆ ಮಾಡಿದ್ದ ಅಧಿಕಾರಿಗಳು, ಶುಕ್ರವಾರ ಯಾವುದೇ ಶಿಕ್ಷಕರನ್ನು ನಿಯೋಜಿಸಿರಲಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಶಾಲೆಗೆ ಬಂದು ಕುಳಿತರೂ ಯಾರೂ ಕೇಳುವವರೇ ಇರಲಿಲ್ಲ.
ನೆಟ್‌ವರ್ಕ್ ವಂಚಿತ ಪ್ರದೇಶದಲ್ಲಿರುವ ಶಾಲೆಯಾಗಿದ್ದು, ಮುಂಜಾನೆ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು ಶಾಲೆಯ ಬೀಗ ತೆಗೆದು ಪ್ರಾರ್ಥನೆ ಮಾಡಿದ್ದಾರೆ. ಕಿರಿಯ ಪ್ರಾಥಮಿಕ ಶಾಲೆಯಾಗಿದ್ದು, 5 ವಿದ್ಯಾರ್ಥಿಗಳು ಶಾಲೆಯಲ್ಲಿದ್ದಾರೆ. ಆದರೆ ಯಾವುದೇ ಶಿಕ್ಷಕರು ಆಗಮಿಸದೇ ಇರುವುದರಿಂದ ಶಾಲಾ ಆವಾರದಲ್ಲಿ ಸಮಯ ಕಳೆಯುತ್ತಿದ್ದಾಗ ಬಿಸಿಯೂಟ ಕಾರ್ಯಕರ್ತೆ ಮಧ್ಯಾಹ್ನದವರೆಗೆ ಇದ್ದು ಬಿಸಿಯೂಟ ಮುಗಿಯುವರೆಗೂ ಯಾವೊಬ್ಬ ಶಿಕ್ಷಕರು ಶಾಲೆಯತ್ತ ಮುಖ ಮಾಡಿಲ್ಲ. ಈ ವಿಷಯ ಗಮನಕ್ಕೆ ಬಂದು ಸ್ಥಳೀಯರೊಬ್ಬರು ಮಾಧ್ಯಮದವರಿಗೆ ವಿಷಯ ತಲುಪಿಸಿದಾಗ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಾಗ ಮಧ್ಯಾಹ್ನದ ನಂತರ ಓರ್ವ ಶಿಕ್ಷಕರು ಶಾಲೆಗೆ ಭೇಟಿ ನೀಡಿದ್ದಾರೆ.
ಕೋಟ್…
ಶಾಲೆಯಲ್ಲಿ ಇಂತಹ ಬೆಳವಣೆಗೆ ನಡೆದಿರುವುದು ಬೆಳಕಿಗೆ ಬಂದಿದ್ದು, ಮಾಹಿತಿ ಪಡೆಯಲಾಗಿದೆ. ಮಧ್ಯಾಹ್ನದ ಬಳಿಕ ಓರ್ವ ಶಿಕ್ಷಕರನ್ನು ಕಳುಹಿಸಲಾಗಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
• ಜಿ.ಎಸ್.ನಾಯ್ಕ, ಶಿಕ್ಷಣಾಧಿಕಾರಿ