ಶಿರಸಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ದಾಕ್ಷಾಯಿಣಿ ಜಿ.ಹೆಗಡೆ ಅವರು ಪ್ರೊಫೆಸರ್ ಆಗಿ ಪದೋನ್ನತಿ ಹೊಂದಿದ್ದು, ಅವರನ್ನು ಕಾಲೇಜಿನ ಅಧ್ಯಾಪಕರು, ಸಿಬ್ಬಂದಿ ಅಭಿನಂದಿಸಿದರು.
ದಾಕ್ಷಾಯಿಣಿಯವರುತಾಲೂಕಿನ ಮತ್ತಿಗಾರ್ ಗ್ರಾಮದ ಗುಬ್ಬಿಮನೆಯ ಗಣಪತಿ ಹೆಗಡೆ ಹಾಗೂ ಭಾಗೀರಥಿ ಹೆಗಡೆ ದಂಪತಿಗಳ ಪುತ್ರಿ. ಕರ್ನಾಟಕ ರಾಜ್ಯ ಗ್ರಂಥಪಾಲಕರ ಸಂಘದ ರಾಜ್ಯ ಮಾಜಿ ಕಾರ್ಯದರ್ಶಿ ಹಾಗೂ ಯಲ್ಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಯ್ಕೆ ಶ್ರೇಣಿ ನಿವೃತ್ತ ಗ್ರಂಥಪಾಲಕ ಎಂ.ಎಂ.ಹೆಬ್ಬಳ್ಳಿ ಅವರ ಪತ್ನಿಯಾಗಿರುವ ಅವರು, ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ 32 ವರ್ಷಗಳಿಂದ ಕರ್ತವ್ಯ ಸಲ್ಲಿಸುತ್ತಿದ್ದು, ಸರಕಾರದ ಆದೇಶದನ್ವಯ ವಾಣಿಜ್ಯಶಾಸ್ತ್ರ ವಿಷಯದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಏಕೈಕ ಪ್ರಾಧ್ಯಾಪಕರಾಗಿ ಪದೋನ್ನತಿ ಹೊಂದಿ ಕಾಲೇಜಿನ ಹಿರಿಮೆ ಹೆಚ್ಚಿಸಿದ್ದಾರೆ.
ಕಾಲೇಜಿನ ಅಭಿವೃದ್ಧಿಯಲ್ಲಿ ಅಮೂಲಾಗ್ರ ಬದಲಾವಣೆ ತಂದು ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಿದ ಅವರು ಪದೋನ್ನತಿ ಹೊಂದಿದ್ದರಿಂದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ತಾಲೂಕಿನ ಗಣ್ಯರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.