ಕಾರವಾರ: ತಾಲೂಕಿನ ಶಿರವಾಡ ಗ್ರಾಮ ಪಂಚಾಯತಿ ಆವರಣದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸ್ವ-ಸಹಾಯ ಸಂಘದ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು, ದುರ್ಬಲ ವರ್ಗದವರಿಗೆ ತಲುಪಿಸುವ ಹಾಗೂ ಮಹಿಳಾ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಉದ್ದೇಶದಿಂದ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡಿಗೆ, ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ, ಜಲ ಸಂಜೀವಿನಿ ಕ್ರಿಯಾ ಯೋಜನೆ ತಯಾರಿಕೆ, ಮಹಿಳಾ ದೌರ್ಜನ್ಯ ನಿವಾರಣಾ ಅಭಿಯಾನ ಆಚರಿಸಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಅರುಣಾ ಎನ್., ತಾಲೂಕಾ ಐಇಸಿ ಸಂಯೋಜಕರಾದ ಫಕೀರಪ್ಪ ತುಮ್ಮಣ್ಣನವರ ಮಾತನಾಡಿ, ನರೇಗಾದಡಿ ಲಭ್ಯವಿರುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳು, ವಸತಿ ಯೋಜನೆಯಡಿ ಮನೆ ನಿರ್ಮಾಣ, ಎನ್‌ಆರ್‌ಎಲ್‌ಎಂ ಮತ್ತು ನರೇಗಾ ಒಗ್ಗೂಡಿಸುವಿಯಡಿ ಮಹಿಳೆಯರಿಗೆ ಲಭ್ಯವಿರುವ ಎನ್‌ಆರ್‌ಎಲ್‌ಎಂ ವರ್ಕ್ ಶೆಡ್, ನರ್ಸರಿ, ಪೌಷ್ಟಿಕ ಕೈತೋಟ, ಜಾನುವಾರು, ಕುರಿ, ಕೋಳಿ ಶೆಡ್ ನಿರ್ಮಾಣ ಕಾಮಗಾರಿ, ಮಹಿಳೆಯರು ಮತ್ತು ಮಕ್ಕಳ ಮೇಲಾಗುವಂತ ದೌರ್ಜನ್ಯಗಳ ನಿವಾರಣೆ ಮತ್ತು ತಡೆಗಟ್ಟುವ ಕ್ರಮ, ಉದ್ಯೋಗ ಚೀಟಿ ಹಾಗೂ ಕೆಲಸಕ್ಕೆ ಬೇಡಿಕೆ ಸಲ್ಲಿಸುವ ಪ್ರಕ್ರಿಯೆ, ಜೀಯೋ ಸ್ಪೆಷಿಯಲ್ ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕವಾಗಿ ಜಲ ಸಂಜೀವಿನಿ ಕ್ರಿಯಾ ಯೋಜನೆ ತಯಾರಿಸುವ ಕುರಿತ ಮಾಹಿತಿಯನ್ನು ಸಭೆಯಲ್ಲಿ ಉಪಸ್ಥಿತರಿದ್ದ ಮಹಿಳೆಯರಿಗೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಸಿಡಿಪಿಒ ಕಚೇರಿಯ ನಿವೃತ್ತ ಅಧೀಕ್ಷಕಿ ಹೇಮಲತಾ ತಾಂಡೇಲ್ ಅವರು ಮಾತನಾಡಿ, ಸಮಾಜದಲ್ಲಿ ಜರುಗುವಂತ ಲಿಂಗ ತಾರತಮ್ಯ, ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ರಕ್ಷಣಾ ಕಾನೂನು, ಉಚಿತ ಸಹಾಯವಾಣಿ ಸಂಖ್ಯೆ, ಸಾಂತ್ವನ ಕೇಂದ್ರಗಳ ಬಗ್ಗೆ ಸವಿವರವಾಗಿ ತಿಳಿಸಿದರು.
ಇದೇವೆಳೆ ಗ್ರಾಮ ಪಂಚಾಯತಿ ಮಟ್ಟದ ಸಂಜೀವಿನಿ ಒಕ್ಕೂಟದಿಂದ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಮಹಿಳಾ ದೌರ್ಜನ್ಯ ನಿವಾರಣೆಗೆ ಸಂಬಂಧಿಸಿದಂತೆ ಉತ್ತಮವಾಗಿ ರಂಗೋಲಿ ಬಿಡಿಸಿದಂತ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಜೊತೆಗೆ ಸಮಾಜದಲ್ಲಿ ಆಗುವಂತಹ ದೌರ್ಜನ್ಯ ತಡೆ, ಲಿಂಗ ತಾರತಮ್ಯ ನಿವಾರಣೆ ಕುರಿತು ಮೇಣದ ದೀಪ ಹಿಡಿದು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಶಿರವಾಡ ಗ್ರಾಮ ಪಂಚಾಯತಿ ಅಧ್ಯಕ್ಷೆ ಅಶ್ವಿನಿ ಬಾಂದೇಕರ್, ಎನ್‌ಆರ್‌ಎಲ್‌ಎಂನ ಟಿಪಿಎಂ ಸುಬ್ರಹ್ಮಣ್ಯ ಶಿರೂರ, ಸಿಎಸ್ ಯೋಗೇಶ ನಾಯ್ಕ್, ಎಂಬಿಕೆ ರೇಖಾ, ಸೇರಿದಂತೆ ಸ್ವ-ಸಹಾಯ ಸಂಘದ ಮಹಿಳೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.