ಕಾರವಾರ: ನಗರೋತ್ಥಾನ ಯೋಜನೆಯಡಿ ರಾಜ್ಯದಾದ್ಯಂತ ಕರೆಯಲಾಗಿದ್ದ ಪ್ಯಾಕೇಜ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ವಿವಿಧ ಜಿಲ್ಲೆಗಳ ಒಟ್ಟು ಎಂಟು ತಾಲೂಕುಗಳಿಗೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದು ನಮಗೆ ಸಿಕ್ಕ ಪ್ರಪ್ರಥಮ ಐತಿಹಾಸಿಕ ಜಯವಾಗಿದೆ ಎಂದು ಕಾರವಾರ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1 ಕೋಟಿಗೂ ಮಿಕ್ಕಿದ ಕಾಮಗಾರಿಗಳನ್ನು ಪ್ಯಾಕೇಜ್ ಮಾಡಬಾರದು ಎಂಬ ಸರ್ಕಾರದ ಆದೇಶವಿದೆ. ಆದರೂ ಕೆಲ ಜನಪ್ರತಿನಿಧಿಗಳ ಒತ್ತಡದಿಂದ ಕಾಮಗಾರಿಗಳನ್ನು ಪ್ಯಾಕೇಜ್ ಮಾಡುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿ ಹಾಗೂ ಸರ್ಕಾರಕ್ಕೂ ಮನವಿ ಮಾಡಿಕೊಂಡು, ಪ್ಯಾಕೇಜ್ ಕಾಮಗಾರಿಗಳನ್ನು ಮಾಡದಂತೆ ಆಗ್ರಹಿಸಿದ್ದೆವು. ಒಂದುವೇಳೆ ಕ್ರಮ ಕೈಗೊಳ್ಳದಿದ್ದಲ್ಲಿ ಕೋರ್ಟ್ ಮೊರೆ ಹೋಗುವುದಾಗಿಯೂ ತಿಳಿಸಿದ್ದೆವು ಎಂದರು.
ಮನವಿ ನೀಡಿದ ಬಳಿಕವೂ ಪ್ಯಾಕೇಜ್ ಮಾಡುವುದು ಮುಂದುವರಿದ ಕಾರಣ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಶಿರಸಿ ಹಾಗೂ ದಾಂಡೇಲಿ ತಾಲೂಕುಗಳಿಂದ ನಗರೋತ್ಥಾನ ಕಾಮಗಾರಿಗಳ ಪ್ಯಾಕೇಜ್ ಟೆಂಡರ್ ಬಗ್ಗೆ ಕೋರ್ಟ್ಗೆ ಹೋಗಲಾಗಿತ್ತು. ಜೊತೆಗೆ ಹಾನಗಲ್, ರಾಣೇಬೆನ್ನೂರು, ಹಾವೇರಿ, ಕೊಪ್ಪಳ ಹಾಗೂ ಗಂಗಾವತಿ ತಾಲೂಕುಗಳಿಂದಲೂ ಕೋರ್ಟ್ನಲ್ಲಿ ಈ ಬಗ್ಗೆ ಪ್ರಶ್ನಿಸಲಾಗಿತ್ತು. ಈ ಎಲ್ಲಾ ಪ್ರಕರಣಗಳಲ್ಲಿ ನಮಗೆ ಜಯ ಸಿಕ್ಕಿದ್ದು, ಕೋರ್ಟ್ ತಡೆಯಾಜ್ಞೆ ನೀಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಿ.ಕೆ.ನಾಯ್ಕ, ಅನೀಲ್ ಮಾಳ್ಸೇಕರ್, ವಿಜಯ್ ದೇಸಾಯಿ, ನಿತಿನ್ ಕೊಳಂಬಕರ್ ಮುಂತಾದವರಿದ್ದರು.