ಶಿರಸಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಶಾಲಾ ಪೌಷ್ಠಿಕ ಕೈತೋಟ, ವೈಯಕ್ತಿಕ ಪೌಷ್ಠಿಕ ಕೈತೋಟ ನಿರ್ಮಾಣದಲ್ಲಿ ಅನುಷ್ಠಾನ ಇಲಾಖೆಗಳೊಂದಿಗೆ ಜಂಟಿಯಾಗಿ ಕಾರ್ಯ ನಿರ್ವಹಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿ ದೇವರಾಜ್ ಹಿತ್ತಲಕೊಪ್ಪ ಅಧಿಕಾರಿಗಳಿಗೆ ತಿಳಿಸಿದರು.
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಶಾಲಾ ಪೌಷ್ಠಿಕ ಕೈತೋಟ, ವೈಯಕ್ತಿಕ ಪೌಷ್ಠಿಕ ಕೈತೋಟ ಕುರಿತ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಆಯುಕ್ತಾಲಯದ ನಿರ್ದೇಶನದಂತೆ ಪೌಷ್ಠಿಕತೆ ಕಾಪಾಡುವ ನಿಟ್ಟಿನಲ್ಲಿ ಶಾಲಾ/ವೈಯಕ್ತಿಕ ಪೌಷ್ಠಿಕ ಕೈತೋಟ, ನರ್ಸರಿ ನಿರ್ಮಾಣ ಮುಂತಾದ ಕಾಮಗಾರಿಗಳಿಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯತ್‌ಗೆ 101 ರಂತೆ ಪೌಷ್ಠಿಕ ಕೈತೋಟ ನಿರ್ಮಾಣಕ್ಕೆ ಗುರಿ ನೀಡಲಾಗಿದೆ. ಎಲ್ಲಾ ಇಲಾಖೆಗಳು ಒಮ್ಮತದಿಂದ ಕಾರ್ಯನಿರ್ವಹಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕರಾದ ರಾಮಮೂರ್ತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ರವಿ ಬೆಂಚಳ್ಳಿ, ಕೃಷಿ ಸಹಾಯಕ ನಿರ್ದೇಶಕರಾದ ಮಧುಕರ ನಾಯ್ಕ್, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಗಣೇಶ ಹೆಗಡೆ, ಎನ್ ಆರ್ ಎಲ್ ಎಮ್ ವಲಯ ಮೇಲ್ವಿಚಾರಕರು, ತಾಲೂಕು ಐಇಸಿ ಸಂಯೋಜಕರು, ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.