ಅಂಕೋಲಾ: ಕಳೆದ ಮೂರು- ನಾಲ್ಕು ದಿನಗಳಿಂದ ಮಾಂಡೋಸ್ ಚಂಡಮಾರುತದ ಪ್ರಭಾವದಿಂದ ತಾಲೂಕಿನಾದ್ಯಂತ ತುಂತುರು ಮಳೆ ಸುರಿಯುತ್ತಿದ್ದು, ಬುಧವಾರ ಸಂಜೆ ಹೊತ್ತಿಗೆ ಪಟ್ಟಣದಲ್ಲಿ ಭಾರಿ ಮಳೆ ಆರ್ಭಟಿಸಿದೆ.
ಮಾಂಡೋಸ್ ಮಳೆಯಿಂದಾಗಿ ಗೇರು ಬೆಳೆದ ರೈತರು ಕೂಡ ಕಂಗಾಲಾಗಿದ್ದಾರೆ. ತಾಲೂಕಿನಲ್ಲಿ ಗೇರು ನೆಡುತೋಪಿನಲ್ಲಿ ಈಗಾಗಲೇ ಗೇರು ಮರಗಳಿಗೆ ಹೂ ಬಿಟ್ಟಿದ್ದ ಪರಿಣಾಮ ಹೂಗಳು ಮಳೆಗೆ ಉದುರಿ ಹೊಗುತ್ತಿದೆ. ಇದು ರೈತರ ಮೇಲೆ ಭಾರಿ ಬರೆ ಬೀಳುವಂತಾಗಿದೆ.
ಮಾಂಡೋಸ್ ಚಂಡಮಾರುತದ ಪ್ರಭಾವದ ಅಕಾಲಿಕ ಮಳೆಯು ತಾಲೂಕಿನ ಬೆಳೆಗಾರರ ನೆಮ್ಮದಿ ಕಸಿದಿದೆ. ಈ ಬಾರಿ ಅತಿಯಾದ ವರುಣನ ಅಬ್ಬರಕ್ಕೆ ಒಂದು ತಿಂಗಳು ತಡವಾಗಿ ಕೃಷಿ ಪ್ರಕ್ರಿಯೆಗಳು ಪ್ರಾರಂಭವಾಯಿತು. ಪ್ರವಾಹ ಮತ್ತು ಮಳೆಯೂ ಕಾಡಿದ್ದರಿಂದ ಸಾಗುವಳಿಗೆ ಕೊಂಚ ಹಿನ್ನಡೆಯೂ ಆಗಿತ್ತು. ಈಗ ಮತ್ತೆ ಮಳೆಯು ತನ್ನ ಆರ್ಭಟದಿಂದ ಇನ್ನಿತರ ಬೆಳೆಗಳಿಗೂ ಮಾರಕವಾಗುವಂತೆ ಕಾಣುತ್ತಿದೆ.