ಕಾರವಾರ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸ್‌ರೊಂದಿಗೆ ಸರಿಸಮಾನರಾಗಿ ಸೇವೆ ಸಲ್ಲಿಸುವ ಗೃಹರಕ್ಷರ ಪಾತ್ರ ಶ್ಲಾಘನೀಯ ಎಂದು ಡಿವೈಎಸ್ಪಿ ಅರವಿಂದ ಕಲಗುಜ್ಜಿ ಹೇಳಿದರು. ಕೋಡಿಬಾಗದ ಜಿಲ್ಲಾ ಗೃಹರಕ್ಷಕದಳ ಕಚೇರಿಯ ಆವರಣದಲ್ಲಿ ಗೃಹರಕ್ಷಕದಳ ದಿನಾಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿ, ಕಾನೂನು ಪರಿಪಾಲನೆಯ ವಿವಿಧ ಕಾರ್ಯಗಳಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಗೃಹರಕ್ಷಕರ ಸೇವೆಯು ಸದಾ ಸ್ಮರಣೀಯ. ಶಿಸ್ತು, ಸಂಯಮ ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕರು ಸಮಾಜದ ಬಹು ದೊಡ್ಡ ಆಸ್ತಿ ಎಂದರು. ಕೋವಿಡ್ ಸಂದರ್ಭದಲ್ಲಿ ಗೃಹರಕ್ಷಕರ ಸೇವೆಯನ್ನು ಸ್ಮರಿಸಿದರು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಂಜುನಾಥ ಸಾಲಿ ಮಾತನಾಡಿ, ಅಗ್ನಿಶಾಮಕದಳ, ಪೋಲಿಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಗೃಹರಕ್ಷಕರು ಮೌಲ್ಯಯುತ ಸೇವೆ ಸಲ್ಲಿಸುತ್ತಿದ್ದಾರೆ. ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೇ ನಿಷ್ಕಾಮ ಸೇವೆಯಲ್ಲಿ ತೊಡಗಿರುವ ಗೃಹರಕ್ಷಕರು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ದೀಪಕ ಗೋಕರ್ಣ ವಹಿಸಿದ್ದರು. ಘಟಕದ ಅತ್ಯುತ್ತಮ ನಿರ್ವಹಣೆಗಾಗಿ ದಾಂಡೇಲಿ ಘಟಕದ ಡಿ.ಬಿ.ಕಾಂಬ್ಳೆ ಹಾಗೂ ಕುಮಟಾ ಘಟಕಾಧಿಕಾರಿ ಸಿ.ಡಿ.ನಾಯ್ಕ ಅವರನ್ನು ಫಲಪುಷ್ಪ, ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾರವಾರ ಘಟಕದ ಎಸ್.ಕೆ.ನಾಯ್ಕ ಪ್ರಾರ್ಥಿಸಿ ವಂದಿಸಿದರು. ಕಚೇರಿಯ ಸಿಬ್ಬಂದಿ ಶ್ರೀನಿವಾಸ ನಾಯಕ ಸ್ವಾಗತಿಸಿದರು. ಚೆಂಡಿಯಾ ಘಟಕದ ರಾಘವೇಂದ್ರ ಗಾಂವಕರ್ ನಿರೂಪಿಸಿದರು.