ಕುಮಟಾ: ಮಾನವನ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದೇ ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ನರೇಂದ್ರ ಬಿ.ಆರ್. ಹೇಳಿದರು.
ತಾಲೂಕು ಆಡಳಿತ, ವಕೀಲರ ಸಂಘ, ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜ್‌ನ ಸಹಕಾರದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಒಬ್ಬ ವ್ಯಕ್ತಿಯು ಕಾನೂನಿನ ಚೌಕಟ್ಟಿನಲ್ಲಿ ಸಮಾಜದ ರೀತಿ ನೀತಿಯಲ್ಲಿ ಅವನು ಬಾಳಬೇಕು. ಸಮಾಜದ ಪರಿಧಿಯಲ್ಲಿ ಅವನು ಗೌರವದಿಂದ ಹೇಗೆ ಇರಬೇಕು. ಅವನ ಹಕ್ಕುಗಳೇನು ಎಂದು ತಿಳಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ನಡೆಸುತ್ತಿದ್ದೇವೆ. ಈ ಕಾರ್ಯಕ್ರಮಗಳ ಮೂಲಕ ಅನೇಕ ಹಕ್ಕುಗಳನ್ನು ಸಂವಿಧಾನ ಕೊಟ್ಟಿದೆ. ಅದರಲ್ಲಿ ಗೌರವದಿಂದ ಜೀವಿಸುವ ಹಕ್ಕು, ವಾಕ್ ಸ್ವಾತಂತ್ರ‍್ಯದ ಹಕ್ಕು ಹೀಗೆ ಅನೇಕ ಸ್ವಾತಂತ್ರ ದ ಹಕ್ಕು ನೀಡಿದೆ. ಇಂಥ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದರು.
ಮಾನವ ಹಕ್ಕುಗಳ ಬಗ್ಗೆ ಉಪನ್ಯಾಸಕ ಎಸ್ ಎಂ ನಾಯ್ಕ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಆಯುಕ್ತರಾದ ರಾಘವೇಂದ್ರ ಜಗಲಾಸರ ಅವರು ಮಾತನಾಡಿ, ಮಾನವ ಹಕ್ಕುಗಳ ಬಗ್ಗೆ ತಿಳಿಸಿ ಶುಭ ಕೊರಿದರು. ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷೆ ಮಮತಾ ನಾಯ್ಕ ಹಾಗೂ ಪಿಎಸ್‌ಐ ನವೀನ ನಾಯ್ಕ ಪಾಲ್ಗೊಂಡಿದ್ದರು.
ಕಾಲೇಜಿನ ಪ್ರಾಚಾರ್ಯ ಸತೀಶ ಬಿ ನಾಯ್ಕ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರಜ್ಞಾ ಆಚಾರಿ ಪ್ರಾರ್ಥಿಸಿದಳು. ಉಪನ್ಯಾಸಕ ಎಸ್ ವಿ ನಾಯ್ಕ ನಿರೂಪಿಸಿದರು. ತಹಶೀಲ್ದಾರ್ ವಿವೇಕ ಶೇಣ್ವಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು, ವಕೀಲರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.