ಕಾರವಾರ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು 25 ವಸಂತಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಸ್ಥೆಯ ರಜತ ಮಹೋತ್ಸವದ ಕೊಡುಗೆಯಾಗಿ ಪ್ರಯಾಣಿಕರಿಗೆ ರಿಯಾಯಿತಿಯೊಂದಿಗೆ ನಗರ, ಉಪನಗರ, ಸಾಮಾನ್ಯ, ವೇಗದೂತ ಹಾಗೂ ತಡೆರಹಿತ ಸಾರಿಗೆಗಳಲ್ಲಿ ಒಂದು, ಎರಡು ಹಾಗೂ ಮೂರು ತಿಂಗಳ ಅವಧಿಗೆ ರಿಯಾಯಿತಿ ಪಾಸುಗಳನ್ನು ನೀಡಲು ಮುಂದಾಗಿದೆ.
ಪ್ರಸ್ತುತ ನೀಡಲಾಗುತ್ತಿರುವ 30 ದಿನಗಳ ಮಾಸಿಕ ಪಾಸುಗಳಲ್ಲಿ ಹೆಚ್ಚುವರಿಯಾಗಿ 2 ದಿನ ವಿಸ್ತರಣೆ (32) ಮಾಡಿಕೊಡಲಾಗುತ್ತಿದೆ. ಮಾಸಿಕ ಬಸ್ ಪಾಸುಗಳಿಗೆ 20 ದಿನಗಳ ಪ್ರಯಾಣ ದರವನ್ನು ಪಾವತಿಸಿ 32 ದಿನಗಳು ಪ್ರಯಾಣಿಸಲು ಅವಕಾಶವನ್ನು ಕೂಡ ಕಲ್ಪಿಸಲಾಗಿದೆ. ಈ ಯೋಜನೆಯು ಡಿಸೆಂಬರ್ 15ರಿಂದ ಮಾರಾಟವಾಗುವ ಮಾಸಿಕ ಪಾಸುಗಳಿಗೆ ಅನ್ವಯವಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಮಾಸಿಕ ಪಾಸುಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ವಾಕರಸಾ ಸಂಸ್ಥೆ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.