ದಾಂಡೇಲಿ: ನಗರದ ನಿರ್ಮಲನಗರದ ನಿವಾಸಿ ಹಾಗೂ ಅಳ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪರ್ವೀನ್ ಎಂ.ಶೇಖ್ ಅವರು’ ಗ್ರಾಮೀಣಾಭಿವೃದ್ಧಿಯಲ್ಲಿ ಮೂಲಭೂತ ಸೌಕರ್ಯಗಳ ಪಾತ್ರ’ ಎಂಬ ವಿಷಯದ ಮೇಲೆ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇವರಿಗೆ ಪ್ರಶಸ್ತಿ ಪತ್ರವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೀಡಿ ಗೌರವಿಸಿದರು. ಪರ್ವೀನ್ ಎಂ.ಶೇಖ್ ಅವರು ಡಾ.ಹುಚ್ಚುಸಾಬ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿದ್ದರು. ವಿದ್ಯಾರ್ಥಿ ದೆಸೆಯಲ್ಲಿಯೆ ಪ್ರತಿಭಾನ್ವಿತರಾಗಿದ್ದ ಪರ್ವೀನ್, ಸ್ನಾತಕೋತ್ತರ ಪದವಿ ಮುಗಿಸಿ ಆರು ತಿಂಗಳೊಳಗೆ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯಾಗಿ ನೇಮಕಗೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಇವರ ಪತಿ ಡಾ.ನಾಸೀರ್ ಖಾನ್ ಜಂಗೂಬಾಯಿಯವರು ದಾಂಡೇಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಪರ್ವೀನ್ ಅವರ ಸಾಧನೆಗೆ ನಗರದ ಗಣ್ಯರನೇಕರು ಅಭಿನಂದನೆ ಸಲ್ಲಿಸಿದ್ದಾರೆ.