ಯಲ್ಲಾಪುರ: ಕುಮಟಾ- ಅಂಕೋಲಾದಿ0ದ ಬಂದು ಜನವಸತಿ ಪ್ರದೇಶದಲ್ಲಿ ಮೀನು ಮಾರಾಟ ಮಾರುವ ಮಹಿಳೆಯರನ್ನು ತೆರವುಗೊಳಿಸುವ ಕಾರ್ಯಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂಗನಬಸಯ್ಯ ತೆರಳಿರಲಿಲ್ಲ ಎಂದು ಪ.ಪಂ ಸದಸ್ಯ ಸೋಮೇಶ್ವರ ನಾಯ್ಕ ತಿಳಿಸಿದ್ದಾರೆ.
ಟಿಎಂಎಸ್ ಪೆಟ್ರೋಲ್ ಪಂಪ್ ಎದುರು ನ್ಯೂ ಪ್ರಭು ಹೊಟೇಲ್ ಬಯಲು ಜಾಗದಲ್ಲಿ ಮೀನು ಮಾರಾಟ ಮಾಡುವ ಮಾರಾಟಗಾರರನ್ನು ತೆರವುಗೊಳಿಸುವ ಸಂದರ್ಭದಲ್ಲಿ ಮುಖ್ಯಾಧಿಕಾರಿ ಸಂಗನಬಸಯ್ಯನವರು ಪಟ್ಟಣ ಪಂಚಾಯತಿ ಕಚೇರಿಯಲ್ಲಿಯೇ ಇದ್ದರು. ನಾನು ಹಾಗೂ ಇನ್ನೋರ್ವರು ಅವರೊಂದಿಗೆ ಕಾಮಗಾರಿಯ ಕುರಿತು ಚರ್ಚೆ ಮಾಡುತ್ತಿದ್ದೆವು. ಆ ಸಂದರ್ಭದಲ್ಲಿ ಮೀನುಗಾರರ ತೆರವಿಗೆ ತೆರಳಿದ ಸಿಬ್ಬಂದಿಗಳು ಮರಳಿ ಬಂದು, ಜಾಗ ಖಾಲಿ ಮಾಡಲು ಒಪ್ಪದೇ ಮೀನು ಮಾರಾಟಗಾರ ಮಹಿಳೆಯರು ತೀವ್ರ ಪ್ರತಿರೋಧ ಒಡ್ಡುತ್ತಿದ್ದಾರೆ ಎಂದು ಮುಖ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಎಂದು ಹೇಳಿದ್ದಾರೆ.
ಹೊರ ಪ್ರದೇಶದಿಂದ ಬಂದ ಪಟ್ಟಣದ ಜನವಸತಿ ಪ್ರದೇಶದಲ್ಲಿ ಮೀನು ಮಾರಾಟ ಮಾಡುವವರ ಅನುಕೂಲಕ್ಕಾಗಿಯೇ ಮೀನು ಮಾರುಕಟ್ಟೆಯನ್ನು ಕೆಲ ಮಟ್ಟಿಗೆ ನವೀಕರಣ ಮಾಡಿ, ಹೆಚ್ಚುವರಿ ಕಟ್ಟೆ ಹಾಗೂ ಶೆಡ್ ಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಕಟ್ಟೆಗಳನ್ನು ಬಾಡಿಗೆಗೆ ಪಡೆದು ಯಾವುದೇ ತೊಂದರೆ ಇಲ್ಲದೇ ಮೀನು ಮಾರಾಟ ಮಾಡಬಹುದಾಗಿದೆ. ಪಟ್ಟಣ ಪಂಚಾಯಿತಿಯಿಂದ ಪ್ರತಿದಿನ ಸ್ವಚ್ಛತೆ ಹಾಗೂ ತ್ಯಾಜ್ಯ ವಸ್ತುಗಳ ವಿಲೇವಾರಿಗಾಗಿ ವಾಹನ ಹಾಗೂ ಸಿಬ್ಬಂದಿಗಳು ಮಾರುಕಟ್ಟೆಗೆ ಬರುತ್ತಾರೆ. ಮೀನು ಮಾರಾಟಗಾರರಿಂದಲೂ ಸಾರ್ವಜನಿಕರಿಗೆ ಸಮಸ್ಯೆ ಆಗುವುದಿಲ್ಲ, ಸಾರ್ವಜನಿಕರಿಂದ ಮೀನು ಮಾರಾಟಗಾರರಿಗೂ ಕುಡ ಸಮಸ್ಯೆ ಆಗದೆ ಮುಕ್ತವಾಗಿ ಮೀನು ಮಾರಾಟ ಮಾಡಬಹುದಾಗಿದೆ. ಇದನ್ನು ಬಳಕೆ ಮಾಡಿಕೊಳ್ಳುವಂತೆ ಹಲವಾರು ಬಾರಿ ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುವವರಿಗೆ ಸಲಹೆ ನೀಡಲಾಗಿತ್ತು, ಎಲ್ಲೆಂದರಲ್ಲಿ ಮೀನು ಮಾರಾಟ ಮಾಡುತ್ತಿರುವುದರಿಂದ ಮೀನು ಮಾರುಕಟ್ಟೆಯಲ್ಲಿ ಬಾಡಿಗೆ ಕಟ್ಟೆ ಪಡೆದು ಮೀನು ಮಾರಾಟ ಮಾಡುವ ಖಾಯಂ ವ್ಯಾಪಾರಿಗಳಿಗೆ ಹಾನಿಯಾಗುತ್ತಿತ್ತು. ಹೀಗಾಗಿ, ಖಾಯಂ ವ್ಯಾಪಾರಿಗಳು ಕೂಡ ಮೀನು ಮಾರುಕಟ್ಟೆಯ ಹೊರಗೆ ಜನವಸತಿ ಪ್ರದೇಶಗಳಲ್ಲಿ ಮೀನು ಮಾರಾಟ ಪ್ರಾರಂಭ ಮಾಡಿದ್ದರು. ಇದರಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮೀನಿನ ನೀರು ಕೊಳೆತ ಮೀನುಗಳನ್ನು ರಸ್ತೆ ಬದಿಯಲ್ಲಿ ಎಸೆಯುವ ಕಾರಣಕ್ಕೆ ಬಹಳಷ್ಟು ಜನ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ ಪ.ಪಂ.ಕ್ಕೆ ದೂರಿದ್ದರು. ಇಂಥಹ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮೀನು ಮಾರುಕಟ್ಟೆಯಲ್ಲಿಯೇ ಎಲ್ಲರೂ ಮೀನು ಮಾರಬೇಕು ಎಂದು ಠರಾವನ್ನು ಕೂಡ ಪಾಸ್ ಮಾಡಲಾಗಿತ್ತು. ಅದರಂತೆ ಮೀನು ಮಾರುಕಟ್ಟೆ ಹೊರತುಪಡಿಸಿ ಹೊರ ಭಾಗದಲ್ಲಿ ಮೀನು ಮಾರಾಟ ಮಾಡುವುದನ್ನು ತೆರವುಗೊಳಿಸಲು ಪೊಲೀಸ್ ರಕ್ಷಣೆಯೊಂದಿಗೆ ಸಿಬ್ಬಂದಿಗಳು ಬುಧವಾರ ತೆರಳಿದ್ದರು. ಆದರೇ, ಪ್ರತ್ಯಕ್ಷದರ್ಶಿಗಳ ಅಭಿಪ್ರಾಯದಂತೆ ಪ.ಪಂ ಸಿಬ್ಬಂದಿಗಳು ಮೀನು ಮಾರಾಟಗಾರ ಮಹಿಳೆಯರ ವಿರುದ್ಧ ಯಾವುದೇ ರೀತಿಯ ದೌರ್ಜನ್ಯ ಎಸಗಿಲ್ಲ ಎಂದು ಹೇಳಿದ್ದಾರೆ.
ಪಟ್ಟಣ ವ್ಯಾಪ್ತಿಯಲ್ಲಿ ಏರುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು ಈಗಿರುವ ಮೀನು ಮಾರುಕಟ್ಟೆಯ ಜೊತೆಗೆ ಬೇರೆ ಬೇರೆ ಕಡೆ ಇನ್ನೂ ಎರಡು ಮೀನು ಮಾರಾಟಕ್ಕೆ ವ್ಯವಸ್ಥೆ ಮಾಡುವಂತೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗದAತಹ ಸೂಕ್ತ ಸ್ಥಳವನ್ನು ಗುರುತಿಸುವಂತೆ ತಿಳಿಸಲಾಗಿದೆ. ಕೆಲವು ದಿನಗಳಲ್ಲಿ ಈ ಪ್ರಕ್ರಿಯೆ ಮುಗಿದು ಇನ್ನೆರಡು ಮಾರುಕಟ್ಟೆಯನ್ನು ಕೂಡ ಬಹುಶಃ ನಿರ್ಮಾಣ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ವಿಡಿಯೋದಲ್ಲಿರುವ ವ್ಯಕ್ತಿ ಇವರಲ್ಲ:
ಕುಮಟಾ- ಅಂಕೋಲಾದಿoದ ಬಂದು ಬುಧವಾರ ಟಿಎಂಎಸ್ ಪೆಟ್ರೋಲ್ ಪಂಪ್ ಎದುರು ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯರಿಗೆ ಕೋಲು ಹಿಡಿದು ಜಾಗ ಖಾಲಿ ಮಾಡುವಂತೆ ಸೂಚಿಸುತ್ತಿರುವ ವ್ಯಕ್ತಿ ಯಲ್ಲಾಪುರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಅಲ್ಲ. ಸಿವಿಲ್‌ಡ್ರೆಸ್ ನಲ್ಲಿರುವ ಯಲ್ಲಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಬಸವರಾಜ ಡಿ.ಕೆ. ಎನ್ನುವವರು. ಈ ಜಾಗದಲ್ಲಿ ಮೀನು ಮಾರಾಟ ಮಾಡದಂತೆ ಅವರು ಹೇಳುತ್ತಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾ ಮೂಲಕ ಅಂಕೋಲಾ- ಕಾರವಾರ- ಕುಮಟಾಗಳಲ್ಲಿ ಯಲ್ಲಾಪುರ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಮಾರಾಟಗಾರರ ಬುಟ್ಟಿಯಲ್ಲಿಯ ಮೀನುಗಳನ್ನು ಚೆಲ್ಲಿ ಹಾಕಿದ್ದಾರೆ. ಮೀನುಗಳ ಮೇಲೆ ಕೆಮಿಕಲ್ ಸಿಂಪಡಿಸಿದ್ದಾರೆ ಎಂದು ಸುದ್ದಿ ಹರಡಿತ್ತು. ಮುಖ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ದೂರು ಕೂಡ ಸಲ್ಲಿಸಲಾಗಿತ್ತು.