ಕುಮಟಾ: ತಾಲೂಕಿನ ಮಿರ್ಜಾನ್ ಅಘನಾಶಿನಿ ನದಿಯ ಬದಿಗೆ ತಗ್ಗು ಸ್ಥಳವಿದ್ದು, ನದಿಯಿಂದ ಹರಿದು ಬರುವ ತಾಜ್ಯ ವಸ್ತುಗಳು, ಸತ್ತ ಪ್ರಾಣಿಗಳು ಕೊಳೆತು ದುರ್ವಾಸನೆಗೆ ಕಾರಣವಾಗಿದೆ. ಇದರಿಂದ ಸ್ಥಳೀಯರು ಕಿರಿಕಿರಿ ಅನುಭವಿಸುವಂತಾಗಿದೆ.
ತಾಲೂಕಿನ ಮಿರ್ಜಾನ್ ಗ್ರಾ.ಪಂ ವ್ಯಾಪ್ತಿಯ ತಾರಿಬಾಗಿಲಲ್ಲಿ ಅಂಬಿಗ ಸಮಾಜದವರೇ ಅಧಿಕ ಸಂಖ್ಯೆಯಲ್ಲಿದ್ದು, ಇಲ್ಲಿನ ಜನರ ಮುಖ್ಯ ಉದ್ಯೋಗವೇ ಮೀನುಗಾರಿಕೆಯಾಗಿದೆ. ಉದ್ಯೋಗಕ್ಕೆ ಅನುಕೂಲವಾಗಲು ಇಲ್ಲಿನ ಜನ ನದಿಯ ತಟದಲ್ಲಿಯೇ ಮನೆ ನಿರ್ಮಿಸಿ ವಾಸಿಸುತ್ತಿದ್ದಾರೆ. ಗಬ್ಬು ನಾರುವ ಈ ಸ್ಥಳದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಮಕ್ಕಳಿಗೆ ಕಚ್ಚುವದರಿಂದ ಅನೇಕ ಮಕ್ಕಳು ಜ್ವರ ಬಾಧೆಯಿಂದ ಬಳಲುತ್ತಿದ್ದಾರೆಂದು ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡರು.
ಸಾಲದಕ್ಕೆ ನದಿಯ ಬದಿಗೆ ಗಿಡಗಳು ಯಥೇಚ್ಚವಾಗಿ ಬೆಳೆದು ನಿಂತಿದ್ದು, ಗಿಡದ ಪೊದೆಯೊಳಗೆ ಹೆಬ್ಬಾವುಗಳು ಕಾಣಿಸಿಕೊಂಡು ಆಗಾಗ ರಂಪಾಟ ಮಾಡುತ್ತಲೇ ಇರುತ್ತದೆ. ಸ್ವಚ್ಛಂದವಾಗಿ ಓಡಾಡಬೇಕಾದ ಮಕ್ಕಳು ಭಯದ ವಾತಾವರಣದಲ್ಲಿ ಬೆಳೆಯಬೇಕಾ ದುಃಸ್ಥಿತಿ ನಿರ್ಮಾಣವಾಗಿದೆ. ಈ ಕುರಿತಂತೆ ಉಪವಿಭಾಗಧಿಕಾರಿ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು ಏನೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರಾದ ಗೋಪಾಲ ಅಂಬಿಗ ಹಾಗೂ ಅಂಬಿಗ ಸಮಾಜದ ಮಹಿಳೆಯರಾದ ಸವಿತ, ಸಾವಿತ್ರಿ, ಗೌರಿ, ಗಂಗೆ, ಜಾನಕಿ, ವಾಸಂತಿ, ಸುಶೀಲಾ ಹಾಗೂ ಪುರುಷರಾದ ಮಂಜು, ಚಂದ್ರು, ಉಮೇಶ, ಸಂತೋಷ, ಅರುನ, ರವಿ ನರಸಿಂಹ ಇತರರು ಆರೋಪಿಸಿದ್ದಾರೆ.
ಸ್ಥಳಕ್ಕೆ 70 ಮೀಟರ್ ಉದ್ದ 15 ಮೀಟರ್ ಅಗಲ ಮಣ್ಣು ಬರಾವು ಮಾಡಿದರೆ ಕೊಳಚೆ ಗುಂಡಿ ಸಮಸ್ಯೆಯಿಂದ ಮುಕ್ತರಾಗುತ್ತೇವೆ. ಅಲ್ಲದೇ ಅಘನಾಶಿನಿಯ ನೀರು ಸರಾಗವಾಗಿ ಸಾಗಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವ ಮೂಲಕ ಜನರ ನ್ಯಾಯಯುತ ಬೇಡಿಕೆಗೆ ಸ್ಪಂದಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.