ದಾಂಡೇಲಿ: ನಗರದ ರೋಟರಿ ಕ್ಲಬ್ ಆಶ್ರಯದಲ್ಲಿ ರೋಟರಿ ಕ್ಲಬ್ ಹಾಗೂ ರೋಟರಿ ಪರಿವಾರದವರಿಗಾಗಿ ಇಮ್ಯಾಜಿನ್ ಕ್ರೀಡಾ ಉತ್ಸವ ಕಾರ್ಯಕ್ರಮವಾದ ಧಾರವಾಡ ಮತ್ತು ಕಾರವಾರ ರೆವಿನ್ಯೂ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಮೀಟ್-2022-23 ಕಾರ್ಯಕ್ರಮವನ್ನು ಡಿ.10 ಮತ್ತು 11ರಂದು ನಗರದ ಡಿಎಫ್‌ಎ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್‌ನ ಇವೆಂಟ್ ಚೇರ್‌ಮೆನ್ ರಾಜೇಶ್ ತಿವಾರಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಈ ಕ್ರೀಡಾ ಉತ್ಸವದಲ್ಲಿ ಧಾರವಾಡ ಮತ್ತು ಕಾರವಾರ ರೋಟರಿ ವಲಯಗಳಿಂದ ಒಟ್ಟು 30 ರೋಟರಿ ಕ್ಲಬ್‌ಗಳು ಮತ್ತು ಅವರ ಪರಿವಾರದವರು ಭಾಗವಹಿಸಲಿದ್ದಾರೆ. ಎರಡು ದಿನಗಳ ವೈವಿದ್ಯಮಯ ಕ್ರೀಡಾ ಉತ್ಸವದಲ್ಲಿ ಕ್ರಿಕೆಟ್, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್, ಕೇರಂ ಹಾಗೂ ಚೆಸ್ ಸ್ಪರ್ಧೆಗಳು ನಡೆಯಲಿವೆ. ಡಿ.ಎಫ್.ಎ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆದರೇ, ಬ್ಯಾಡ್ಮಿಂಟನ್ ಸುಭಾಷ ನಗರದ ಒಳ ಕ್ರೀಡಾಂಗಣದಲ್ಲಿ ಹಾಗೂ ಟೇಬಲ್ ಟೆನ್ನಿಸ್, ಕೇರಂ ಮತ್ತು ಚೆಸ್ ಸ್ಪರ್ಧೆಗಳು ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಬಂಗೂರನಗರ ಕ್ಲಬಿನಲ್ಲಿ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ತಂದುಕೊಡಬೇಕೆ0ದು ವಿನಂತಿಸಿದರು.
ರೋಟರಿ ಕ್ಲಬ್‌ನ ಜಿಲ್ಲಾ ಉಪ ಪ್ರಾಂತಪಾಲ ಎಸ್.ಪ್ರಕಾಶ್ ಶೆಟ್ಟಿ ಮಾತನಾಡಿ, ಇದು ರೋಟರಿ ಕ್ಲಬ್ ಹಾಗೂ ರೋಟರಿ ಪರಿವಾರದವರಿಗಾಗಿ ಹಮ್ಮಿಕೊಂಡಿರುವ ಕ್ರೀಡಾ ಉತ್ಸವವವಾಗಿದೆ. ರೋಟರಿ ಕ್ಲಬ್‌ಗಳ ಧಾರವಾಡ ಮತ್ತು ಕಾರವಾರ ವಲಯ ವ್ಯಾಪ್ತಿಯಲ್ಲಿ ಬರುವ ರೋಟರಿ ಕ್ಲಬ್‌ಗಳು ಈ ಕ್ರೀಡೋತ್ಸವದಲ್ಲಿ ಭಾಗವಹಿಸಲಿವೆ. ಇಲ್ಲಿ ನಡೆಯುವ ಸ್ಪರ್ಧೆಯಲ್ಲಿ ಜಯಗಳಿಸುವ ಎರಡು ತಂಡಗಳು ಕೊಲ್ಲಾಪುರದಲ್ಲಿ ನಡೆಯಲಿರುವ ರೋಟರಿ ಕ್ಲಬ್‌ನ 11 ವಲಯಗಳ ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ ಎಂದರು.
ರೋಟರಿ ಕ್ಲಬ್‌ನ ಅಧ್ಯಕ್ಷ ಸುಧಾಕರ ಶೆಟ್ಟಿ, ಸರಿ ಸುಮಾರು 30 ರೋಟರಿ ಕ್ಲಬ್ ಮತ್ತು ರೋಟರಿ ಕ್ಲಬ್‌ಗಳ ಪರಿವಾರವನ್ನು ಒಂದೇ ಕಡೆ ಸೇರಿಸುವ ರೋಟರಿ ಪರಿವಾರದ ಕಲರವೇ ಈ ಕ್ರೀಡಾ ಉತ್ಸವ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ವಿನಂತಿಸಿದರು.
ಸುದ್ದಿಗೋಷ್ಟಿಯಲ್ಲಿ ರೋಟರಿ ಕ್ಲಬ್‌ನ ಕಾರ್ಯದರ್ಶಿ ಜೋಸೆಫ್ ಗೋನ್ಸಾಲಿಸ್ ಮತ್ತು ಮಿಥುನ್ ನಾಯಕ ಉಪಸ್ಥಿತರಿದ್ದರು.