ಅಂಕೋಲಾ: ಸತತ ಸೋಲಿನ ನಡುವೆಯೂ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ಗೆ ಪುಟಿದೇಳುವ ಶಕ್ತಿ ಇದೆ ಎನ್ನುವುದನ್ನ ತೋರಿಸಿಕೊಟ್ಟಿದ್ದೇವೆ. ಕರ್ನಾಟಕದಲ್ಲೂ ಸಹ ಮೂರು ತಿಂಗಳ ನಂತರ ನಡೆಯುವ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಲ್ಲಾದಂತೆ ಬದಲಾವಣೆಗಳು ಆಗಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿಗರಿಗೆ ದೇಶದಲ್ಲಿ ಪಂಚಾಯತ್‌ನಿ0ದ ಪಾರ್ಲಿಮೆಂಟ್‌ನವರೆಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಲ್ಲಿ ಮತ ಕೇಳುವುದೇ ಬಿಟ್ಟರೆ, ತಮ್ಮ ವೈಯಕ್ತಿಕ ಸಾಧನೆಯಿಂದ ಮತ ಕೇಳಲು ಸಾಧ್ಯವಿಲ್ಲ. ಹಿಮಾಚಲ ಪ್ರದೇಶದಲ್ಲಿ ಮೋದಿಯ ಅಬ್ಬರದ ಪ್ರಚಾರದ ನಡುವೆಯೂ ಮತದಾರ ಕಾಂಗ್ರೆಸ್ ಕಡೆ ಒಲವು ತೋರಿರುವುದು ಜನತೆಗೆ ಕಾಂಗ್ರೆಸ್ ಮೇಲಿರುವ ವಿಶ್ವಾಸ ಹಾಗೂ ಈ ಹಿಂದಿನ ಜನಪರ ಆಡಳಿತಗಳೇ ಕಾರಣ ಎಂದಿದ್ದಾರೆ.
ಗುಜರಾತ್‌ನಲ್ಲಿ 35 ವರ್ಷದ ಹಿಂದೆ ಮಾಜಿ ಮುಖ್ಯಮಂತ್ರಿ ಮಾಧವ ಸಿಂಗ್ ಸೋಳಂಕಿ ನೇತೃತ್ವದಲ್ಲಿ 149 ಸೀಟುಗಳನ್ನು ಗೆಲ್ಲುವ ಮುಖಾಂತರ ಕಾಂಗ್ರೆಸ್‌ನಿ0ದ ಯಾರಿಗೇ ಟಿಕೆಟ್ ಸಿಕ್ಕರೂ ಗೆಲ್ಲುತ್ತಾರೆನ್ನುವ ವಾತಾವರಣವಿತ್ತು. ಆ ವಾತಾವರಣ ಈಗ ಅಲ್ಲಿ ಬಿಜೆಪಿ ಪರವಾಗಿದೆ. ಜನರಿಗೆ ಸುಳ್ಳು ಆಶ್ವಾಸನೆ ನೀಡಿ ತಾವು ಗೆಲ್ಲುತ್ತೇವೆಂಬ ಬಿಜೆಪಿಯವರ ಹೇಳಿಕೆಗಳ ಸತ್ಯ ಅರ್ಥವಾದ ಮೇಲೆ ಅಲ್ಲೂ ಕೂಡ ಮುಂದೆ ಕಾಂಗ್ರೆಸ್ ಬಾವುಟ ಅರಳಲಿದೆ. ವಾಸ್ತವಿಕತೆ ಅರಿವಾದ ಬಳಿಕ ಅಲ್ಲೂ ಕಾಂಗ್ರೆಸ್ ಪರವಾಗಿ ವಾತಾವರಣ ಬದಲಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.