ಹಳಿಯಾಳ: ಶಿಕ್ಷಣದಲ್ಲಿ ಸಾಧನೆಗೈದವರಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳಿವೆ. ಹೀಗಾಗಿ ಸ್ಫರ್ಧಾತ್ಮಕ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕಾಗಿದೆ ಎಂದು ಬೆಂಗಳೂರಿನ ಅರಸೋಜಿರಾವ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಜೈಯಾಜಿರಾವ್ ಹೇಳಿದರು.
ತಾಲೂಕಿನ ಮರಾಠಾ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಹಿಂದವೀ ಸ್ವರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಮರಾಠಾ ಸಮುದಾಯದವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸಂತಸಕರ ಸಂಗತಿಯಾಗಿದೆ. ಮಾತೃಭಾಷೆ ಹಾಗೂ ಆಡುಭಾಷೆ ಮರಾಠಿ ಇದ್ದರೂ ಸಹ ತಾಲೂಕಿನ ಮರಾಠಾ ಸಮುದಾಯದವರು ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುತ್ತ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿರುವುದು ಶ್ಲಾಘನೀಯ ಎಂದರು.
ಜೀಜಾಮಾತಾ, ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಅಭಿಮಾನ ಉಳ್ಳವರಾಗಿ ಸ್ವ ಸಮಾಜ ಹಾಗೂ ಇತರರಿಗೆ ಆದರ್ಶರಾಗಿ ಬಾಳಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಡಾ.ಜೈಯಾಜಿರಾವ್ ಚಾರಿಟಬಲ್ ಸಂಸ್ಥೆಯನ್ನು 1945ರಲ್ಲಿಯೇ ಸ್ಥಾಪನೆ ಮಾಡಿದ ಮಹನೀಯ ಅರಸೋಜಿರಾವ್‌ರವರ ಜನಪರ ಶೈಕ್ಷಣಿಕ ಕಾಳಜಿಯ ಬಗ್ಗೆ ಸ್ಮರಿಸಿದರು.
ತಾಲೂಕಿನ ಮರಾಠಾ ಸಮಾಜದ ಸಾಧನೆಗೈದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ, ಇಂಜಿನಿಯರಿ0ಗ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಪಥದರ್ಶಕ ಸಂಪಾದಕ ಶಿಕ್ಷಕ ಸುರೇಂದ್ರ ಬಿರ್ಜೆರವರ ನೇತೃತ್ವದಲ್ಲಿ, ತಾಲೂಕಾ ಮರಾಠಾ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಚೂಡಪ್ಪಾ ಬೋಬಾಟಿರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅರಸೋಜಿರಾವ್ ಟ್ರಸ್ಟ್ ಕಾರ್ಯದರ್ಶಿ ಪ್ರಭಾಕರರಾವ್ ಸಾವಂತ್, ವ್ಯವಸ್ಥಾಪಕ ರಾಮರಾವ್, ಮರಾಠಾ ಸಮಾಜದ ಹಿರಿಯ ಧುರೀಣ ಎಸ್.ಕೆ.ಗೌಡಾ, ಜೀಜಾಮಾತಾ ಮಹಿಳಾ ಸಂಘದ ಅಧ್ಯಕ್ಷೆ ಮಂಗಲಾ ಕಶಿಲ್ಕರ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ.ಆರ್.ಪಾಟೀಲ, ಎನ್.ಡಿ.ಬಿರ್ಜೆ, ನಿವೃತ್ತ ಸೈನಿಕ ಅಶೋಕ ಮಿರಾಶಿ, ಮರಾಠಾ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಶಿವಾಜಿ ನರಸಾನಿ, ಯಲ್ಲಪ್ಪಾ ಮಾಲವಣಕರ ಮೊದಲಾದವರು ಪಾಲ್ಗೊಂಡಿದ್ದರು.
ಚಾಣಕ್ಯ ಕರಿಯರ ಅಕಾಡಮಿ ಮಾರ್ಗದರ್ಶನದಲ್ಲಿ ಅಗ್ನಿಪಥ ಯೋಜನೆಯಡಿ ಸೈನ್ಯಕ್ಕೆ ಆಯ್ಕೆಯಾದ ಮರಾಠಾ ಸಮುದಾಯದ ಏಳು ಯುವಕರಿಗೆ ಸತ್ಕರಿಸಲಾಯಿತು. ಶಿಕ್ಷಕ ಆನಂದ ತೋರ್ಲೆಕರ ಸ್ವಾಗತಿಸಿದರು, ಉಪನ್ಯಾಸಕ ಶಾಂತಾರಾಮ ಚಿಬ್ಬುಲಕರ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕ ಸುರೇಂದ್ರ ಬಿರ್ಜೆ ವಂದಿಸಿದರು.
ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು: ಡಾ.ಜೈಯಾಜಿರಾವ್
