ಜೊಯಿಡಾ: ತಾಲೂಕಿನ ಸಿದ್ದೇಶ್ವರ ದೇವಸ್ಥಾನದ ರಂಗಮ0ದಿರದಲ್ಲಿ ಹಮ್ಮಿಕೊಂಡಿದ್ದ ಜೊಯಿಡಾ- ಹಳಿಯಾಳ ವಿಧಾನಸಭಾ ಕ್ಷೇತ್ರದ ಗೋಮಂತಕ ಸಮಾಜದ ಬೆಳ್ಳಿ ಹಬ್ಬವನ್ನು ಶಾಸಕ ಆರ್.ವಿ.ದೇಶಪಾಂಡೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕೋಮಾರಪಂತ, ದೇವಳಿ, ಬಾಂದಿ ಸೇರಿದಂತೆ ಹಲವು ಪಂಗಡಗಳು ಸೇರಿಕೊಂಡು ಗೋಮಂತಕ ಸಮಾಜವನ್ನು ಕಟ್ಟಿಕೊಳ್ಳಲಾಗಿದೆ. ಹಲವಾರು ವರ್ಷಗಳಿಂದ ಈ ಸಮಾಜದವರೊಂದಿಗೆ ನಾನು ಉತ್ತಮ ಸಂಬ0ಧ ಹೊಂದಿದ್ದೇನೆ ಎಂದು ಹೇಳಿದರು. ಜೊಯಿಡಾದಲ್ಲಿ ಹಮ್ಮಿಕೊಂಡ ಈ ಸಮಾವೇಶದ ವೇದಿಕೆಗೆ ದಿ.ವಿಲಾಸ ನಾಯ್ಕ ಹೆಸರು ಇಟ್ಟಿದ್ದು ಸರಿ ಇದೆ. ಅವರೂ ಕೂಡ ಇಂಥ ಸಮ್ಮೇಳನ ನಡೆಸಿದ್ದರು. ಈ ಜನ ತುಂಬಾ ಸರಳ ಸ್ವಭಾವದವರು. ಅವರಲ್ಲಿ ಹಲವಾರು ಜನರು ದೇಶದ ಅತ್ಯುನ್ನತ ಹುದ್ದೆಯಲ್ಲಿದ್ದಾರೆ. ಉತ್ತಮ ವ್ಯವಹಾರಸ್ಥರು ಇದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಾಧಕರಿಗೆ, ಹಿರಿಯರಿಗೆ, ವಿದ್ಯಾರ್ಥಿಗಳಿಗೆ ಗಣ್ಯರಿಗೆ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕರಾವಳಿ ಕಾವಲು ಪಡೆಯ ಕಮಾಂಡರ್ ಮನೋಜ್ ಬಾಡಕರ, ವಿಧಾನಸಭೆಯ ಅಧೀನ ಕಾರ್ಯದರ್ಶಿ ಸುಬ್ರಮಣ್ಯ ಎಸ್., ಎಂಜಿನಿಯರ್ ಪ್ರವೀಣ ಈಡೂರ, ವಿನೋದ ಮಿರಾಶಿ, ಪಿವಿ ದೇಸಾಯಿ ಇದ್ದರು. ಜಿ.ಪಂ ಮಾಜಿ ಸದಸ್ಯ ರಮೇಶ ನಾಯ್ಕ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಸಂಘಟಿಸಿದರು. ಬೃಹತ್ ಮೆರವಣಿಗೆ, ಡೊಳ್ಳುಕುಣಿತ , ವೀರಗಾಸೆ ವ್ಯವಸ್ಥಿತ ಊಟೋಪಚಾರ ಗಮನ ಸೆಳೆದವು.