Slide
Slide
Slide
previous arrow
next arrow

ಎಲ್ಲ ಸಮಾಜಗಳು ಮುಖ್ಯ ವಾಹಿನಿಗೆ ಬಂದಾಗ ದೇಶ ಸುಭಿಕ್ಷ: ಪೂಜ್ಯ ಬ್ರಹ್ಮಾನಂದ ಶ್ರೀ

300x250 AD

ಯಲ್ಲಾಪುರ: ಸಣ್ಣಪುಟ್ಟ ಎಲ್ಲ ಸಮಾಜಗಳು ಸಮ ಪ್ರಮಾಣಿತವಾಗಿ ಮುಖ್ಯವಾಹಿನಿಗೆ ಬಂದಾಗ ಮಾತ್ರ ದೇಶ ಸುಭಿಕ್ಷವಾಗುತ್ತದೆ ಮತ್ತು ವಿಶ್ವಗುರು ಆಗುತ್ತದೆ ಎಂದು ಧರ್ಮಸ್ಥಳ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ಮಠಾಧೀಶ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳು ನುಡಿದರು.
ಅವರು ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘ ಹಾಗೂ ಮಂಚಿಕೇರಿಯ ಗುರುವಂದನಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಮಂಚಿಕೇರಿಯ ಮಹಾಗಣಪತಿ ದೇವಸ್ಥಾನದ ಆವಾರದಲ್ಲಿ ನಾಮಧಾರಿ ಸಮಾಜದ ಗುರುವಂದನೆ, ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸುಖ, ನೆಮ್ಮದಿ, ಶಾಂತಿ ಬೇಕು. ಆದರೆ, ಅದನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ಗೊಂದಲವಾಗಿದೆ. ಅನ್ನ ನೀಡುವ ಶಿಕ್ಷಣದೊಂದಿಗೆ ಬದುಕಿಗೆ ಬೆಳಕು ಕೊಡುವ ಶಿಕ್ಷಣವು ನಮ್ಮ ಮಕ್ಕಳಿಗೆ ಬೇಕಾಗಿದೆ. ಸರ್ಕಾರ ಎಲ್ಲವನ್ನು ಕೊಡಲು ಸಾಧ್ಯವಿಲ್ಲ. ಆದರೆ ಸಮಾಜದಲ್ಲಿ ಆರ್ಥಿಕವಾಗಿ ಗಟ್ಟಿಯಿದ್ದವರು ದುರ್ಬಲರ ಕೈಹಿಡಿದು ಮೇಲೆತ್ತಬೇಕು. ಆರ್ಥಿಕವಾಗಿ ಹಿಂದುಳಿದ ಸಮಾಜದ ಪ್ರತಿಭಾವಂತ ಮಕ್ಕಳನ್ನು ದತ್ತು ಪಡೆದು ಅವರನ್ನು ಮೇಲೆತ್ತಬೇಕು. ನಮ್ಮ ಮಕ್ಕಳು ರಾಜಕಾರಣಿಗಳು, ನಟ,ನಟಿಯರನ್ನು ರೋಲ್ ಮಾಡೆಲ್ ಮಾಡಿಕೊಳ್ಳದೇ, ನಾರಾಯಣಗುರು, ಬುದ್ಧರಂತಹ ಮಹಾನ್ ವ್ಯಕ್ತಿಗಳನ್ನು ರೋಲ್ ಮಾಡೆಲ್ ಮಾಡಿಕೊಂಡಾಗ ದೇಶದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಸಂಸ್ಕಾರ ಮತ್ತು ಮೌಲ್ಯಗಳು ಸಮಾಜ ಕಟ್ಟುವ ಕಂಬಗಳಾಗಿದೆ. ಮಕ್ಕಳನ್ನು ಆದರ್ಶ ವ್ಯಕ್ತಿಗಳನ್ನಾಗಿ ಸಿದ್ದ ಮಾಡಬೇಕಾದ ಜವಾಬ್ದಾರಿ ಪಾಲಕರ ಮೇಲಿದೆ. ರಾಜಕೀಯ ವ್ಯಕ್ತಿಗಳು ಸಮಾಜವನ್ನು ತಮ್ಮ ಬೆಳವಣಿಗೆಯ ಮೆಟ್ಟಿಲುಗಳನ್ನಾಗಿ ಬಳಸದಂತೆ ಜಾಗ್ರತೆ ವಹಿಸಬೇಕಾದ ಅವಶ್ಯಕತೆ ಇದೆ ಎಂದು ಅವರು ಕಿವಿ ಮಾತು ಹೇಳಿದರು. ಜಾತಿ ಎಲ್ಲಿ ಸೃಷ್ಟಿಯಾಯಿತು ಎಂಬುವುದರ ಬಗ್ಗೆ ಇದುವರೆಗೂ ಪುರಾವೆಗಳಿಲ್ಲ. ಹಿಂದೆ ಋಷಿ ಮುನಿಗಳು ನೀಡಿದ ಎಲ್ಲಾ ಸಂದೇಶಗಳು ಸಹೋದರತ್ವವನ್ನು ಸಾರಿದೆ. ಆದರೆ, ಇಂದಿನ ರಾಜಕೀಯ ಸ್ಥಿತಿಯಲ್ಲಿ ಜಾತೀಯತೆ ಹೆಚ್ಚಾಗಿದೆ. ಜಾತಿ ಲಿಂಗದ ಮೇಲೆ ಬೇದಿಸುವ ಕೆಲಸ ಎಂದಿಗೂ ಮಾಡಬೇಡಿ ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮಾತನಾಡಿ, ಇಂತಹ ಅನೇಕ ಕಾರ್ಯಕ್ರಮಗಳ ಮೂಲಕ ನಾಮದಾರಿ ಸಮಾಜದವರು ಒಗ್ಗಟ್ಟಾಗಿದ್ದಾರೆ. ಇತರ ಎಲ್ಲ ಸಮಾಜದವರು ಒಂದಾಗಿ ಬೆರೆತು ಸಾಗುತ್ತಿದ್ದಾರೆ. ಹೀಗಾಗಿ ಅವರಿಗೆ ರಾಜಕೀಯ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಅವಕಾಶಗಳು ಹೆಚ್ಚಾಗುತ್ತಿದೆ. ಯಾರು ಎಲ್ಲರ ಜೊತೆಗೆ ಹೊಂದುಕೊ0ಡು ಹೋಗುತ್ತಾರೆ ಅವರಿಗೆ ಎಂದಿಗೂ ಸಮಸ್ಯೆ ಎದುರಾಗುವುದಿಲ್ಲ. ಮುಂದೆ ಗುರಿ ಹಿಂದೆ ಗುರುವಿದ್ದಾಗ ಸಾಧನೆ ಮಾಡುವುದು ಸುಲಭವಾಗಿದೆ. ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಸಮಾಜದ ಹಿರಿಯರಿಂದ ಆಗಲಿ. ಎಲ್ಲ ಸಮಾಜದವರು ಜೊತೆಗೆ ಸೇರಿ ನಾಮದಾರಿ ಸಮಾಜದವರು ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಅವರು ಆಶಿಸಿದರು.
ಮಾಜಿ ಶಾಸಕ ವಿ ಎಸ್ ಪಾಟೀಲ್ ಮಾತನಾಡಿ, ಎಲ್ಲರನ್ನು ಬಳಸಿಕೊಂಡು ಸಮಾಜ ಕಟ್ಟಿದ ನಂತರ ಅದನ್ನೇ ಊರುಗೋಲಾಗಿ ಮೇಲೆ ಹತ್ತಿದವರು ನಂತರ ಸಮಾಜವನ್ನು ಮರೆತುಬಿಡುತ್ತಾರೆ. ಆದರೆ ನಾಮಧಾರಿ ಸಮಾಜದವರು ಹಾಗೆ ಆಗಬಾರದು. ಸಂಘಟನೆಯಲ್ಲಿ ರಾಜಕೀಯ ಬೇಡ, ಆದರೆ ರಾಜಕೀಯದಲ್ಲಿ ಸಮಾಜದವರು ಇರಲಿ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಭೀಮಣ್ಣ ನಾಯ್ಕ ಮಾತನಾಡಿ, ಎಲ್ಲಾಪುರದ ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘ ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜದ ಏಳಿಗೆ ಜೊತೆಗೆ ಪ್ರತಿಭಾ ಪುರಸ್ಕಾರ ಗೌರವ ಕಾರ್ಯಕ್ರಮ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ. ನಾವೆಲ್ಲರೂ ಗುರುಗಳು ಹಾಗೂ ಸಂದೇಶದ ಪಾಲನೆಯ ಮೂಲಕ ಮುನ್ನಡೆಯಬೇಕಾಗಿದೆ. ಸಮಾಜದವರು ಅಂದಿಗೆ ಸೇರಿ ನಾವು ಅಭಿವೃದ್ಧಿ ಹೊಂದಬೇಕಾಗಿದೆ. ನಾಮಧಾರಿ ಸಮಾಜದವರು ಯಾವುದರಲ್ಲಿಯೂ ಕಡಿಮೆ ಇಲ್ಲ. ಇನ್ನು ಹೆಚ್ಚು ಶಿಕ್ಷಣಕ್ಕೆ ಆದ್ಯತೆ ನೀಡುವ ಅಗತ್ಯತೆಯಿದೆ ಎಂದರು.
ಉದ್ಯಮಿ ಈಶ್ವರ ನಾಯ್ಕ ಮಾತನಾಡಿ, ನಾಮಧಾರಿ ಸಮಾಜ ಭವನ ನಿರ್ಮಾಣಕ್ಕೆ ನಿವೇಶನ ಗುರುತಿಸಿ, ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಭಟ್ಕಳ ಹಾಗೂ ಸುತ್ತಮುತ್ತಲಿನಿಂದ ಸಹಾಯ-ಸಹಕಾರ ಒದಗಿಸುವ ಭರವಸೆ ನೀಡಿದರು. ಪ್ರೋ.ನಾಗೇಶ ನಾಯ್ಕ ಕಾಗಲ್ ಮಾತನಾಡಿ, ನಾವು ಯಾವ ಸಮಾಜದಲ್ಲಿ ಹುಟ್ಟಿರುತ್ತೇವೆ ಆ ಸಮಾಜಕ್ಕೆ ಹೆಸರು ತರುವಂತಹ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಹೆಚ್ಚಿರುವ ನಾಮಧಾರಿ ಸಮಾಜದವರ ಮೇಲೆ ಜವಾಬ್ದಾರಿ ಕೂಡ ಹೆಚ್ಚಿದೆ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಸಂತೋಷ ರಾಯ್ಕರ್ ಮಾತನಾಡಿ, ಸ್ನೇಹ- ಪ್ರೀತಿ ಏಕ ಕಾರ್ಯಕ್ಕೆ ಹೆಸರಾದವರು ನಾಮಧಾರಿ ಸಮಾಜದವರು. ಎಲ್ಲ ಸಮಾಜದವರ ಟಿಕೆಟ್ ಒಟ್ಟಿಗೆ ಬೆರೆತು ಬಾಳುವ ಅವರ ರೀತಿ ಆದರ್ಶ ಪ್ರಾಯವಾದದ್ದು ಎಂದರು.
ವಕೀಲರಾದ ರವೀಂದ್ರ ನಾಯ್ಕ, ಡಿವೈಎಸ್.ಪಿ ರವಿ ನಾಯ್ಕ, ಹೆಸ್ಕಾಂ ಸೆಕ್ಷನ್ ಆಫಿಸರ್ ರಮಾಕಾಂತ ನಾಯ್ಕ, ಎ.ಜಿ.ನಾಯ್ಕ, ಟೀಡ್ ಸಂಸ್ಥೆಯ ಮೋಹಿನಿ ಪೂಜಾರಿ, ವಿ.ಎಸ್.ನಾಯ್ಕ ಮಂಚಿಕೇರಿ, ಸೀನಾ ಪೂಜಾರಿ, ಕಂಪ್ಲಿ ಗ್ರಾ ಪಂ ಅಧ್ಯಕ್ಷ ವಿನಾಯಕ ಎಂ.ನಾಯ್ಕ, ಹಾಸಣಗಿ ಗ್ರಾ.ಪಂ ಅಧ್ಯಕ್ಷ ಪುರಂದರ ಎನ್ ನಾಯ್ಕ, ಉಮ್ಮಚಗಿ ಗ್ರಾ.ಪಂ ಅಧ್ಯಕ್ಷೆ ರೂಪಾ ಪೂಜಾರಿ, ಆರ್‌ಎಫ್‌ಓ ಶಿಲ್ಪಾ ನಾಯ್ಕ, ರವಿ ನಾಯ್ಕ ಎಂಜೀನಿಯರ್, ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಸತೀಶ ನಾಯ್ಕ ಮುಂತಾದವರು ವೇದಿಕೆಯಲ್ಲಿದ್ದರು.
ವೇದಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ಗುರುವಂದನಾ ಸಮಿತಿಯ ಅಧ್ಯಕ್ಷ ನರಸಿಂಹ ನಾಯ್ಕ ದಂಪತಿಗಳು ಗುರುಗಳ ಪಾದ ಪೂಜೆ ನೆರವೇರಿಸಿದರು. ಸಂಸ್ಥಾಪಕ ಅಧ್ಯಕ್ಷ ಆರ್.ಆಯ್.ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ನಿಖಿತಾ ನಾಯ್ಕ ಪ್ರಾರ್ಥಿಸಿದಳು. ಸಮಾಜದ ಹಿರಿಯರಾದ ಗಿರಿಧರ ನಾಯ್ಕ ಸ್ವಾಗತಿಸಿದರು. ನಾರಾಯಣ ಶೇರುಗಾರ, ಕೆ.ಆರ್.ನಾಯ್ಕ ಹಾಗೂ ಭಾಸ್ಕರ ನಾಯ್ಕ ನಿರೂಪಿಸಿದರು. ವೆಂಕಟೇಶ ನಾಯ್ಕ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top