ಅಂಕೋಲಾ: ಬೆಳೆಗಾರರ ಸಮಿತಿಯು ತಾಲೂಕಿನ ಸ್ವಾತಂತ್ರ್ಯ ಯೋಧರ ಕುಟುಂಬದವರ ಬಗ್ಗೆ ಅಭಿನಂದಿಸುವ ಕಾರ್ಯವನ್ನು ಮುಂದುವರಿಸಿಕೊ0ಡು ಬಂದಿದ್ದು, ಅವರ್ಸಾದ ಗಾಂಧಿ ಮೈದಾನ ವ್ಯಾಯಾಮ ಶಾಲೆಯ ಆವರಣದಲ್ಲಿ ಅವರ್ಸಾದ ಸ್ವಾತಂತ್ರ್ಯ ಹೋರಾಟಗಾರಾದ ಶಾಂತಾರಾಮ ಪ್ರಭು ಹಾಗೂ ವಿಷ್ಣು ಶೆಟ್ಟಿ ಇವರ ಕುಟುಂಬದವರನ್ನು ಗೌರವಿಸಿದರು.
ಬೆಳೆಗಾರರ ಸಮಿತಿಯ ಕಾರ್ಯ ಚಟುವಟಿಕೆ ಮತ್ತು ಅಂಕೋಲಾದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದು. ಹಾಗೇ ಅವರ ಕುಟುಂಬದವರ ತ್ಯಾಗಗಳನ್ನು ನೆನಪಿಸಿಕೊಳ್ಳುವ ಮೂಲಕ ಇಂದಿನ ಯುವ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟದ ಸನ್ನಿವೇಶಗಳನ್ನು ನೆನಪಿಸುವ ಕಾರ್ಯ ಮಾಡುತ್ತಿರುವದರ ಬಗ್ಗೆ ಪ್ರಾಸ್ತಾವಿಕವಾಗಿ ಸಮಿತಿಯ ಅಧ್ಯಕ್ಷ ನಾಗರಾಜ ನಾಯಕ ಮಾತನಾಡಿದರು.
ಮುಖ್ಯ ವಕ್ತಾರರಾಗಿ ಆಗಮಿಸಿದ್ದ ಜಿ.ಸಿ.ಕಾಲೇಜಿನ ಪ್ರಾಂಶುಪಾಲ ಡಾ.ಸಿದ್ದಲಿಂಗಸ್ವಾಮಿ ವಸ್ತ್ರದ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅಂಕೋಲಾ ತಾಲೂಕಿನ ಹಳ್ಳಿಗಳ ಕೊಡುಗೆ ಅಪಾರವಾದದ್ದು. ಸಂಪರ್ಕದ ಕೊರತೆ ಇದ್ದರೂ ಸಂಘಟನಾತ್ಮಕವಾಗಿ ಎಲ್ಲ ಜಾತಿ, ಜನಾಂಗದವರು ಗಾಂಧೀಜಿಯವರು ಕರೆಕೊಟ್ಟ ಎಲ್ಲ ಸತ್ಯಾಗ್ರಹ ಚಳುವಳಿಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಇಲ್ಲಿಯ ಅನೇಕ ಹೋರಾಟಗಾರರ ಕುರಿತು ಇತಿಹಾಸದಲ್ಲಿ ಸರಿಯಾಗಿ ದಾಖಲಾಗದಿರುವುದು ವಿಷಾದನೀಯ. ಇಲ್ಲಿಯ ಮಣ್ಣಿನ ಕಣ ಕಣದಲ್ಲಿ ಸ್ವಾತಂತ್ರ್ಯ ಹೋರಾಟದ ಕಥೆಗಳಿವೆ. ಅನೇಕ ವೀರ ಮಹಿಳೆಯರು ಭಾಗವಹಿಸಿದ್ದರು. ಸಮಾನ ಮನಸ್ಕ ಬೆಳೆಗಾರರ ಸಮಿತಿಯವರು ಇಂತಹ ವಿನೂತನ ಕಾರ್ಯಕ್ರಮ ಕೈಗೊಂಡು ಹೋರಾಟಗಾರರ ಊರು-ಮನೆಗಳಿಗೆ ತೆರಳಿ ಅಭಿನಂದಿಸುತ್ತಿರುವುದು ನಿಜವಾದ ಅಮೃತ ಮಹೋತ್ಸವ ಆಚರಣೆಯ ಸಾರ್ಥಕ ಕ್ಷಣ. ನಮಗೆಲ್ಲ ಅಂತಹ ಪುಣ್ಯಾತ್ಮರ ಕುಟುಂಬದ ಭೇಟಿ ಮಾಡಿ ಅಭಿನಂದಿಸುವ ಕಾರ್ಯ ಖುಷಿಯಾಗಿದೆ. ಬೆಳೆಗಾರರ ಸಮಿತಿಗೆ ಅಭಿನಂದನೆಗಳನ್ನು ಹೇಳಿದರು.
ಬೆಳೆಗಾರರ ಸಮಿತಿಯ ಪ್ರಶಾಂತ ನಾಯಕ ಮಾತನಾಡಿ, ಪ್ರತಿ ಹಳ್ಳಿಗಳಲ್ಲೂ ಇಂತಹ ಕಾರ್ಯಕ್ರಮ ಆಯೋಜಿಸಿ ಹೋರಾಟಗಾರರ ಶಾಶ್ವತ ನೆನಪು ಇರುವಂತೆ ರಸ್ತೆಗಳಿಗೆ, ಸ್ಮಾರಕ, ಕಟ್ಟಡಗಳಿಗೆ ಅವರ ಹೆಸರನ್ನು ಇಟ್ಟು ಸ್ಮರಿಸಿಕೊಳ್ಳೋಣ ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರ್ಸಾ ಗ್ರಾ.ಪಂ. ಅಧ್ಯಕ್ಷರಾದ ಸಾರಾ ಕುಟಿನೋ ಮಾತನಾಡಿ, ನಮ್ಮ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬೆಳೆಗಾರರ ಸಮಿತಿಯವರು ಬಂದು ನಮ್ಮ ಊರಿನ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ ಅಭಿನಂದಿಸಿದ ಕಾರ್ಯ ಮಹತ್ವಪೂರ್ಣವಾದದ್ದು. ನಾವೆಲ್ಲ ಅವರ ತ್ಯಾಗಗಳಿಗೆ ಋಣಿಯಾಗಿದ್ದೇವೆ. ನಮ್ಮ ಪಂಚಾಯಿತಿ ವ್ಯಾಪ್ತಿಯ ಕೆಲವು ರಸ್ತೆಗಳಿಗೆ ಮುಂದಿನ ದಿನಗಳಲ್ಲಿ ಹೋರಾಟಗಾರರ ಹೆಸರನ್ನು ಇಟ್ಟು ಶಾಶ್ವತವಾಗಿ ಅವರನ್ನೇ ನೆನಪಿಸಿಕೊಳ್ಳುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.
ಗ್ರಾ.ಪಂ. ಸದಸ್ಯರಾದ ಅನಂತ ಭಟ್ಟ, ಪ್ರಮುಖರಾದ ಸಾಯಿಕಿರಣ ಶೇಟಿಯಾ, ಹೊನ್ನಪ್ಪ ನಾಯಕ, ಮಹೇಶ ನಾಯಕ, ಶಿವಾ ನಾಯ್ಕ, ಮಹೇಶ ನಾಯ್ಕ ಇನ್ನಿತರರು ಭಾಗವಹಿಸಿದ್ದರು. ಬೆಳೆಗಾರರ ಸಮಿತಿಯ ಕಾರ್ಯದರ್ಶಿ ರಾಮಚಂದ್ರ ಹೆಗಡೆ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿ ಗೌರವಾಧ್ಯಕ್ಷರಾದ ದೇವರಾಯ ನಾಯಕ ಬೊಳೆ, ಸದಸ್ಯರಾದ ರಾಮಾ ನಾಯಕ, ಹೊನ್ನಪ್ಪ ನಾಯಕ, ರಾಜಕುಮಾರ ನಾಯಕ ಇನ್ನಿತರರು ಭಾಗವಹಿಸಿದ್ದರು. ಹೋರಾಟಗಾರರ ಕುಟುಂಬದವರಾದ ವಿನೋದ ಪ್ರಭು ಹಾಗೂ ವೆಂಕಟೇಶ್ ಶೇಟಿಯಾ ಇವರನ್ನು ಗೌರವಿಸಲಾಯಿತು.
***
ಸ್ವಾತಂತ್ರ್ಯ ಯೋಧರ ಕುಟುಂಬಗಳಿಗೆ ಸನ್ಮಾನ ಮುಂದುವರಿಸಿದ ಬೆಳೆಗಾರರ ಸಮಿತಿ
