ಯಲ್ಲಾಪುರ: ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ ಕ್ರೀಡಾ ಮನೋ ಭಾವನೆಯಿಂದ ಆಡುವ ಮೂಲಕ ಪಂದ್ಯವನ್ನು ಯಶಸ್ವಿಗೊಳಿಸಬೇಕು ಎಂದು ಧಾತ್ರಿ ಫೌಂಡೇಶನ್ ಮುಖ್ಯಸ್ಥ ಶ್ರೀನಿವಾಸ ಭಟ್ಟ ಹೇಳಿದರು.
ಅವರು ಶನಿವಾರ ತಾಲೂಕಿನ ವಜ್ರಳ್ಳಿ ಸರ್ವೋದಯ ಪ್ರೌಢಶಾಲೆಯ ಮೈದಾನದಲ್ಲಿ ವಜ್ರೇಶ್ವರಿ ಯುವಕ ಮಂಡಳ ಹಾಗೂ ಕ್ರೀಡಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಸೂರಿ ಗೆಳೆಯರ ಬಳಗ ಹಾಗೂ ವಿವಿಧ ಸಂಘಟನೆಗಳ ಸಹಕಾರದಲ್ಲಿ ನಡೆದ ತಾಲೂಕಾ ಮಟ್ಟದ ಹೊನಲು ಬೆಳಕಿನ ಲೋ ಟೆನಿಸ್ ಬಾಲ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಯುವಕರು ಕ್ರೀಡೆಯಿಂದ ವಿಮುಖರಾಗುತ್ತಿರುವ ಇಂದಿನ ದಿವಸಗಳಲ್ಲಿ ವಜ್ರಳ್ಳಿಯ ಭಾಗದ ಯುವಕರು ಸಂಘಟಿತರಾಗಿ, ಕ್ರೀಡೆ, ಇತ್ಯಾದಿ ಸಾಮಾಜಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವಲ್ಲಿ ಶ್ರಮಿಸುತ್ತ, ಸಂಘಟಿತರಾಗಿರುವುದು ಗಮನಾರ್ಹ ಬೆಳವಣಿಗೆ ಎಂದರು.
ಸರ್ವೋದಯ ಪ್ರೌಢಶಾಲೆಯ ಉಪಾಧ್ಯಕ್ಷ ವಿ.ಎನ್.ಭಟ್ಟ ವಜ್ರಳ್ಳಿ ಮಾತನಾಡಿ, ಸಾಮಾಜಿಕ ವಿಧಾಯಕ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳುವ ಮೂಲಕ ವಜ್ರೇಶ್ವರಿ ಯುವಕ ಸಂಘ ಸಾಮಾಜಿಕ ಜವಬ್ದಾರಿಯನ್ನು ಉತ್ತಮವಾಗಿ ನಿಭಾಯಿಸುತ್ತಿದೆ ಎಂದರು.
ವಜ್ರೇಶ್ವರಿ ಯುವಕ ಸಂಘದ ಅಧ್ಯಕ್ಷ ಸತೀಶ ಗಾಂವ್ಕರ್ ಕುಂಬ್ರಿಕೊಟ್ಟಿಗೆ, ಸಂಘಟಕ ಮುನ್ನಾ ವಜ್ರಳ್ಳಿ, ಕವಿ ಪತ್ರಕರ್ತ ಸುಬ್ರಾಯ ಬಿದ್ರೆಮನೆ, ಸಂಘಟನೆಯ ಪ್ರಮುಖರಾದ ರಾಜೇಶ, ರಾಜೇಶ್, ರವಿ ಪೂಜಾರಿ, ನವೀನ, ರಾಜು ಗೌಡ ಮುಂತಾದವರು ಉಪಸ್ಥಿತರಿದ್ದರು. ನರೇಶ ಶೇರುಗಾರ ಸ್ವಾಗತಿಸಿದರು. ಶಂಕರ ಗೌಡ ವಂದಿಸಿದರು. ನಿರ್ಣಾಯಕರಾಗಿ ವೆಂಕಿ ನಂದೊಳ್ಳಿ ಕಾರ್ಯನಿರ್ವಹಿಸಿದರು. ತಾಲೂಕಿನ ವಿವಿಧ ಭಾಗಗಳಿಂದ ಒಟ್ಟು 24 ತಂಡಗಳು ಭಾಗವಹಿಸಿದ್ದವು.