ಯಲ್ಲಾಪುರ: ಪ್ರತಿದಿನ ಹತ್ತು ಸಾವಿರಕ್ಕೂ ಹೆಚ್ಚಿನ ವಾಹನ ಓಡಾಡುತ್ತದೆ, ಹೀಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚು. ಕಾರವಾರದಿಂದ ಹುಬ್ಬಳ್ಳಿಯವರೆಗೂ ನಡುವೆ ಯಾವುದೇ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಇಲ್ಲ. ಇಂತಹ ಸಂದರ್ಭದಲ್ಲಿ ತಜ್ಞ ವೈದ್ಯರು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅನಿವಾರ್ಯತೆ ಇದೆ ಎಂದು ರಾಜ್ಯ ವಿಕೇಂದ್ರಿಕರಣ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ಶನಿವಾರ ಪಟ್ಟಣದ ಅಡಿಕೆ ಭವನದಲ್ಲಿ ಹುಬ್ಬಳ್ಳಿ ತಜ್ಞ ವೈದ್ಯ ಅದ್ರಿತ್ ಎಂಡೋಕ್ರೈನ್ ಆಂಡ್ ಡಯಾಬಿಟೀಸ್ ಕ್ಲಿನಿಕ್ ಮತ್ತು ಸಂಕಲ್ಪ ಸಂಸ್ಥೆ ಸಹಯೋಗದಲ್ಲಿ ಉಚಿತ ಮಧುಮೇಹ, ಕಿಡ್ನಿ ಕಾಯಿಲೆ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು. ನೂರಕ್ಕೆ ಎಪ್ಪತ್ತರಷ್ಟು ಜನರಲ್ಲಿ ಆಹಾರ ಮತ್ತು ಜೀವನ ಕ್ರಮದಿಂದಾಗಿ ಸಕ್ಕರೆ ಖಾಯಿಲೆ ಕಾಡುತ್ತಿದೆ. 21ನೇ ಶತಮಾನದಲ್ಲಿ ಬದುಕಿನ ಓಟದಲ್ಲಿ ರಕ್ತದೊತ್ತಡ ಹಾಗೂ ಮಧುಮೇಹ ಸಾಮಾನ್ಯವಾಗುತ್ತಿದೆ. ಕಿಡ್ನಿ ಖಾಯಿಲೆಗಳು ಕೂಡ ಅಷ್ಟೇ ಹೆಚ್ಚಾಗುತ್ತಿವೆ. ಬಹಳಷ್ಟು ಡಯಾಲಿಸಿಸ್ಗೆ ಒಳಪಡುತ್ತಿರುವುದು ಆತಂಕದ ವಿಷಯ. ಆ ದೃಷ್ಟಿಯಿಂದ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಮಹತ್ವ ನೀಡುವುದು ಅನಿವಾರ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ರವಿ ಹೆಗಡೆ ಮಾತನಾಡಿ, ಇಂತಹ ಶಿಬಿರಗಳಲ್ಲಿ ಬಂದ0ತಹ ಶಿಬಿರಾರ್ಥಿಗಳಿಗೆ ಮುಂದೆ ತಮ್ಮ ಆಸ್ಪತ್ರೆಗೆ ಬಂದಾಗ ರಿಯಾಯಿತಿ ಚಾರ್ಜ್ ಮಾಡುವುದು ಅಗತ್ಯವಾಗಿದೆ ಎಂದರು. ಡಾ.ಶಿದ್ರಾಮ ಕಮತೆ ಮಾತನಾಡಿ, ಜಗತ್ತಿನಲ್ಲಿ ನೂರರಲ್ಲಿ ಇಪ್ಪತ್ತು ಜನ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಿಪಿ- ಶುಗರ್ ಸಾಮಾನ್ಯವಾಗಿದೆ. ಅದಕ್ಕಾಗಿ ಮೊದಲೇ ಆರೋಗ್ಯದ ಬಗ್ಗೆ ಜಾಗೃತಿ ವಹಿಸುವುದು ಬಹಳ ಅಗತ್ಯವಾಗಿದೆ ಎಂದರು.
ವೇದಿಕೆಯಲ್ಲಿ ಸಕ್ಕರೆ ಕಾಯಿಲೆ ತಜ್ಞೆ ಡಾ.ಚಂದನ ಕಾಮತ್, ನಾರಾಯಣ ಹೆಗಡೆ ಹುಟುಕುಮನೆ ಉಪಸ್ಥಿತರಿದ್ದರು. ಪತ್ರಕರ್ತ ಶಂಕರ ಭಟ್ ತಾರೀಮಕ್ಕಿ ಸ್ವಾಗತಿಸಿ ನಿರ್ವಹಿಸಿದರು. ಸಂಘಟಕ ಗೋಪಾಲಕೃಷ್ಣ ಜೋಷಿ ವಂದಿಸಿದರು.
ವಾಹನ ಸಂಚಾರ ಹೆಚ್ಚಿರುವ ಕಡೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅವಶ್ಯ: ಪ್ರಮೋದ ಹೆಗಡೆ
