ಸಿದ್ದಾಪುರ: ಸಮಾಜದ ನಡುವೆ ನಡೆಯುವ ಅಪರಾಧಗಳನ್ನು ತಡೆಯುವಲ್ಲಿ ಸಾರ್ವಜನಿಕರ ಕಾರ್ಯ ಬಹಳ ಮುಖ್ಯವಾಗುತ್ತದೆ. ಅವರು ಕೈಗೊಳ್ಳುವ ಮುಂಜಾಗ್ರ ಕ್ರಮಗಳು ಅತ್ಯಂತ ಮಹತ್ವದಾಗಿರುತ್ತದೆ. ಈ ಬಗ್ಗೆ ಜನತೆ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಡಿವೈಎಸ್ಪಿ ರವಿ ಡಿ.ನಾಯ್ಕ ಹೇಳಿದರು.
ಅವರು ಪಟ್ಟಣದ ಪೊಲೀಸ್ ಠಾಣಾ ಅವರಣದಲ್ಲಿ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಅಪರಾಧ ತಡೆ ಮಾಸಾಚರಣೆ ಜಾಥಾವು ಪೊಲೀಸ್ ಠಾಣೆಯಿಂದ ಹೊರಟು ರಾಮಕೃಷ್ಣ ಹೆಗಡೆ ಸರ್ಕಲ್ ಮುಖಾಂತರ ರಾಜಮಾರ್ಗಕ್ಕೆ ಹೊರಟು, ನಂತರ ಅಶೋಕ ರಸ್ತೆ ಮಾರ್ಗವಾಗಿ ಭಗತ್ ಸಿಂಗ್ ಸರ್ಕಲ್‌ನಿಂದ ಪುನಃ ಪೊಲೀಸ್ ಠಾಣೆಗೆ ಆಗಮಿಸಿತು.
ಜಾಥಾದಲ್ಲಿ ಎಂಜಿಸಿ ಕಾಲೇಜ್, ವಿದ್ಯಾರ್ಥಿಗಳು, ಹಾಳದಕಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು, ಸಿದ್ಧಿವಿನಾಯಕ ಪ್ರೌಢಶಾಲಾ ವಿದ್ಯಾರ್ಥಿಗಳು, ಬೇಡ್ಕಣಿ ಕಾಲೇಜ್ ವಿದ್ಯಾರ್ಥಿಗಳು, ಸಿದ್ದಾಪುರ ತಾಲೂಕ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಹಾಗೂ ಶಾಲಾ ಕಾಲೇಜುಗಳ ಉಪನ್ಯಾಸಕರು ಹಾಗೂ ಶಿಕ್ಷಕರು ಭಾಗವಹಿಸಿದ್ದರು.
ಕಲ್ಲೂರು ಶಾಲಾ ವಿದ್ಯಾರ್ಥಿಗಳು ಡೊಳ್ಳು ಬಾರಿಸುವುದರ ಮೂಲಕ ಜಾಥಾಕ್ಕೆ ಮೆರುಗನ್ನ ತಂದರು. ಲಿಟ್ಲ್ ಫ್ಲವರ್ ಶಾಲೆಯ ವಿದ್ಯಾರ್ಥಿಗಳು ಬ್ಯಾಂಡ್ ಮೂಲಕ ಜಾತಾದಲ್ಲಿ ಭಾಗವಹಿಸಿದ್ದರು. ಅಪರಾಧ ತಡೆ ಮಾಸಾಚರಣೆ ಜಾಥಾದ ಮೂಲಕ ಅಪರಾಧ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಠಾಣೆಯ ಪೊಲೀಸ್ ನಿರೀಕ್ಷಕ ಕುಮಾರ ಕೆ., ಪಿಎಸೈಗಳಾದ ಮಹಂತಪ್ಪ ಕುಂಬಾರ್, ಮಲ್ಲಿಕಾರ್ಜುನಯ್ಯ ಕೊರಾನಿ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕುಮಾರ ಡಿ.ನಾಯ್ಕ ಹಾಗೂ ಸಿದ್ದಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.