ಕಾರವಾರ: ಅಂಡಮಾನ್ ನಿಕೋಬಾರ್ ಇರುವಂತಹ 21 ಜನವಸತಿ ರಹಿತ ದ್ವೀಪಗಳಿಗೆ ಮರುನಾಮಕರಣ ಮಾಡಿದ್ದು,ಕನ್ನಡಿಗ ಮೇಜರ್ ರಾಮಾ ರಾಗೋಬಾ ರಾಣೆ ಸೇರಿದಂತೆ ಒಟ್ಟು 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಕೇಂದ್ರ ಸರ್ಕಾರ ಇಟ್ಟಿದೆ. ದೇಶಕ್ಕಾಗಿ ಬಲಿದಾನ ಗೈದ ವೀರ ಯೋಧರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪರಮವೀರ ಚಕ್ರ ಪಡೆದ ಯೋಧರ ಹೆಸರನ್ನು ಇಡಲು ನೀಡಿದ ಸೂಚನೆಯಂತೆ ಜಿಲ್ಲೆಯ ಹೆಮ್ಮೆಯ ಪುತ್ರನ ಹೆಸರು ಕೂಡ ದ್ವೀಪಕ್ಕೆ ಮರುನಾಮಕರಣವಾಗಿದ್ದು ಉತ್ತರಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
ಮೇಜರ್ ರಾಮಾ ರಾಗೋಬಾ ರಾಣೆ ಕಾರವಾರದ ಚೆಂಡಿಯಾ ಗ್ರಾಮದ ಮೂಲದವರಾಗಿದ್ದು 1947ರ ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನ ಆಕ್ರಮಿಸಿಕೊಂಡ ಕೆಲವು ಭಾಗಗಳನ್ನು ಮರಳಿ ಪಡೆಯುವ ಕಾರ್ಯದಲ್ಲಿ ತೋರಿದ ಪರಾಕ್ರಮಕ್ಕಾಗಿ ರಾಮಾ ರಾಗೋಬಾ ರಾಣೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರಾಗಿದ್ದರು. ಭಾರತದ ಅತ್ಯುನ್ನತ ಪ್ರಶಸ್ತಿಯಾದ ಪರಮವೀರ ಚಕ್ರ ಪ್ರಶಸ್ತಿಯನ್ನು ಜೀವಂತವಾಗಿ ಸ್ವೀಕರಿಸಿದ ಮೊದಲ ವ್ಯಕ್ತಿ ಕೂಡ ಇವರಾಗಿದ್ದರು.