ಮುಂಡಗೋಡ: ಸರ್ಕಾರದ ಅಧೀನದಲ್ಲಿ ಪ್ರತಿ ಮೂರು ತಿಂಗಳಿಗೆ ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಕ್ಕೆ ಕೋಟ್ಯಾಂತರ ರೂ. ಅನುದಾನ ನೀಡಲಾಗುತ್ತಿದೆ ಎಂದು ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ತಾಲೂಕಿನ ನಂದಿಕಟ್ಟಾ ಗ್ರಾಮದ ಗ್ರಾ.ಪಂ. ಆವರಣದಲ್ಲಿ ಗ್ರಾಮೀಣ ಅಭಿವೃದ್ಧಿ, ಪಂಚಾಯತ್‌ರಾಜ್ ಇಲಾಖೆ, ಕೌಶಲ್ಯ ಅಭಿವೃದ್ಧಿ ಜಿಲ್ಲಾ ಪಂಚಾಯತ ಉತ್ತರ ಕನ್ನಡ, ತಾಲೂಕು ಪಂಚಾಯಿತಿ ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಮತ್ತು ಗ್ರಾಮ ಪಂಚಾಯಿತಿ ನಂದಿಕಟ್ಟಾ ಇವರ ಸಹಯೋಗದಲ್ಲಿ ಜರುಗಿದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬ ನಿರ್ವಹಣೆಗೆ ಸಂಜೀವಿನಿ ಆದರ್ಶ ಸಂಸ್ಥೆಯಾಗಿದೆ. ಇಡಿ ರಾಜ್ಯದಲ್ಲಿ ಸಂಜೀವಿನಿಗೆ ಬೇಕಾದ ಆರ್ಥಿಕ ಶಕ್ತಿಯನ್ನು ಅತಿ ದೊಡ್ಡ ಪ್ರಮಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನೀಡಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಸಚಿವರನ್ನು ಮತ್ತು ತಾ.ಪಂ.ಇಒ ಪ್ರವೀಣ ಕಟ್ಟಿ ಅವರನ್ನು ಸನ್ಮಾನಿಸಲಾಯಿತು. ಮಾಸಿಕ ಸಂತೆಯಲ್ಲಿ ಒಕ್ಕೂಟದ ನಾನಾಬಗೆಯ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿತ್ತು.
ನಂತರ ಸಚಿವರು ತಾಲೂಕಿನ ಉಗ್ಗಿನಕೇರಿ, ನಂದಿಕಟ್ಟಾ, ಹುನಗುಂದ ಜಿಲ್ಲಾ ಮುಖ್ಯ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ನಂದಿಕಟ್ಟಾ ಗ್ರಾ.ಪಂ.ವ್ಯಾಪ್ತಿಯ ಬಸಾಪುರ ಗ್ರಾಮದ ಮಾರುತಿ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಜಿ.ಪಂ.ಮಾಜಿ ಸದಸ್ಯ ರವಿಗೌಡ ಪಾಟೀಲ, ನಾಗಭೂಷಣ ಹಾವಣಗಿ, ಗ್ರಾ.ಪಂ. ಅಧ್ಯಕ್ಷೆ ಮಾರೆಕ್ಕ ದುರಮುರ್ಗಿ, ಸಂಸ್ಥೆಯ ಸಂಯೋಜಕಿ ಶ್ಯಾಮಲಾ ನಾಯ್ಕ, ಪಂಚಾಯತ್‌ರಾಜ್ ಇಂಜಿನಿಯರ ಪ್ರದೀಪ ಭಟ್, ದೇವು ಪಾಟೀಲ, ಕೆಂಜೋಡಿ ಗಲಬಿ, ಗಿರೀಶ ಹೆಗಡೆ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಗ್ರಾ.ಪಂ.ಸದಸ್ಯರು ಹಾಗೂ ಮುಂತಾದವರು ಉಪಸ್ಥಿತರಿದ್ದರು.