ಶಿರಸಿ: ತಾಲೂಕಿನ ಬನವಾಸಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಕಲಾ, ವಾಣಿಜ್ಯ, ವಿಜ್ಞಾನ ವಸ್ತು ಪ್ರದರ್ಶನ ಸೋಮವಾರ ನಡೆಯಿತು. ವಿದ್ಯಾರ್ಥಿಗಳು ವಿವಿಧ ಭೌತ, ರಸಾಯನ, ಜೀವಶಾಸ್ತ್ರಗಳ ಹಾಗೂ ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಅತ್ಯುತ್ತಮ ಮಾದರಿಗಳನ್ನು ಸಿದ್ಧಪಡಿಸಿ ಪ್ರದರ್ಶನಕ್ಕೆ ಇಟ್ಟಿದ್ದರು. ಅಲ್ಲದೆ ಇತಿಹಾಸ ಹಾಗೂ ಸಾಮಾಜಿಕ ಜೀವನದ ಪ್ರತಿಬಿಂಬವಾದ ಸಂಗ್ರಹ ಯೋಗ್ಯ ವಸ್ತುಗಳನ್ನು ಪ್ರದರ್ಶಿಸಿದರು. ಇಂದಿನ ಅರ್ಥ ವ್ಯವಸ್ಥೆಯಲ್ಲಿ ಬಳಕೆಯಾಗುತ್ತಿರುವ ವಿವಿಧ ಆರ್ಥಿಕ ಸಂಘಟನೆಗಳು ಹಾಗೂ ಈ ಕಾಮರ್ಸ್ ಗೆ ಸಂಬಂಧಿಸಿದ ವಸ್ತುಗಳೂ ಇದ್ದವು. ಕಾಲೇಜಿನ ವಿದ್ಯಾರ್ಥಿಗಳ ಕುಶಲತೆಯ ವಸ್ತುಗಳಾದ ಅಲಂಕಾರಿಕ ವಸ್ತುಗಳು ಹಾಗೂ ಪ್ಲೇಟಿನಲ್ಲಿ ಮೂಡಿಸಲಾದ 60ಕ್ಕೂ ಹೆಚ್ಚು ಆಕರ್ಷಣೀಯ ಚಿತ್ರಗಳು ವೀಕ್ಷಕರ ಗಮನ ಸೆಳೆದವು.
ವಸ್ತು ಪ್ರದರ್ಶನವನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸಿದ್ದಲಿಂಗಪ್ಪ ಉಗ್ರಾಣದ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಬನವಾಸಿ ಕಾಲೇಜಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು ಅವರಲ್ಲಿರುವ ಕುಶಲತೆ ಈ ವಸ್ತು ಪ್ರದರ್ಶನದಲ್ಲಿ ಪ್ರಕಟಗೊಂಡಿದೆ. ತರಗತಿಯ ಪಾಠ ಅಷ್ಟೇ ಅಲ್ಲ, ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಈ ಎಲ್ಲಾ ಚಟುವಟಿಕೆಗಳು ಪೂರಕವಾಗಿವೆ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಿರಸಿ ಮಾರಿಕಾಂಬ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಬಾಲಚಂದ್ರ ಭಟ್ಟ ಆಗಮಿಸಿದ್ದರು. ಅವರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿದ್ದ ಬನವಾಸಿ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ, ಗುಣಮಟ್ಟ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಉತ್ತಮವಾದ ಸಾಧನೆಯನ್ನು ಮಾಡುತ್ತಿದೆ. ಈ ವಸ್ತು ಪ್ರದರ್ಶನ ವಿದ್ಯಾರ್ಥಿಗಳ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ ಎಂದರು. ಕಾಲೇಜಿನ ಪ್ರಾಚಾರ್ಯ ಎಂ ಕೆ ನಾಯ್ಕ ಹೊಸಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಮಾತನಾಡುತ್ತಾ ಉಪನ್ಯಾಸಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ತಮ ವಸ್ತು ಪ್ರದರ್ಶನ ನೀಡಿದ್ದಾರೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಪ್ರಕಾಶ ಬಂಗ್ಲೆ, ಅಶೋಕ ನಾಯ್ಕ ಮಧುರವಳ್ಳಿ, ಪೂರ್ಣಿಮಾ ಪಿಳ್ಳೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ರಕ್ಷಿತಾ ಮತ್ತು ನಿವೇದಿತ ಪ್ರಾರ್ಥಿಸಿದರು. ಉಪನ್ಯಾಸಕರಾದ ಪ್ರಭಾವತಿ ಹೆಗಡೆ ಸ್ವಾಗತಿಸಿದರು.ಎ.ಆರ್. ಪ್ರಕಾಶ್ ವಂದಿಸಿದರು. ತನುಜಾ ನಾಯ್ಕ ನಿರೂಪಿಸಿದರು. ಅಕ್ಕಪಕ್ಕದ ಪ್ರೌಢಶಾಲಾ ವಿದ್ಯಾರ್ಥಿಗಳೂ ವಸ್ತು ಪ್ರದರ್ಶನ ವೀಕ್ಷಿಸಿ, ವಸ್ತು ಪ್ರದರ್ಶನದ ಸದುಪಯೋಗ ಪಡೆದುಕೊಂಡರು.