ಶಿರಸಿ: ಎಲ್ಲಾ ದುಷ್ಟ ಚಟಗಳಿಂದ ದೂರವಿರುವುದೇ ಇಂದಿನ ಮಕ್ಕಳು ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ರಾಮಬಾಣವಾಗಬಲ್ಲದೆಂದು ಸ್ತ್ರೀ ತಜ್ಞ, ಪ್ರಸಿದ್ಧ ವೈದ್ಯರಾದ, ಶಿರಸಿ ಕೌಮುದಿ ನರ್ಸಿಂಗ್ ಹೋಮ್ ನ ಎಂ.ಜೆ.ಎಫ್.ಲಯನ್ ಡಾಕ್ಟರ್ ಜಿ.ಎಂ. ಹೆಗಡೆ ನ.29 ಮಂಗಳವಾರದಂದು ಮಧ್ಯಾಹ್ನ ಲಯನ್ಸ್ ಸಭಾಭವನದಲ್ಲಿ ನಡೆದ “ಮಕ್ಕಳ ಕ್ಯಾನ್ಸರ್ ರೋಗ ಇದರ ಬಗ್ಗೆ ಮಕ್ಕಳಲ್ಲಿ ಜಾಗೃತಿ ” ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೆಪ್ಟೆಂಬರ್ ತಿಂಗಳನ್ನು ಕ್ಯಾನ್ಸರ್ ಜಾಗೃತಿ, ಮಾಸವಾಗಿ ಆಚರಣೆ ಮಾಡುವ ವೈದ್ಯ ಲೋಕದ ಘನ ಉದ್ದೇಶದ ಬಗ್ಗೆ ಮಾತನಾಡುತ್ತಾ ಸರ್ಕಾರ, ಸಮಾಜ ಎಲ್ಲರಲ್ಲಿ ಕ್ಯಾನ್ಸರ್ ವಿರುದ್ಧದ ಹೋರಾಟದ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವೆಂದು ತಿಳಿಸಿದರು. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಈ ಭಯಂಕರ ರೋಗವಾದ ಕ್ಯಾನ್ಸರ್ ರೋಗಿಗಳು ಬಹುತೇಕವಾಗಿ ಗುಣಮುಖರಾಗುವುದು ಒಂದು ಬಗೆಯ ಲಕ್ಷಣವಾದರೆ, ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಮಾಹಿತಿ ಕೊರತೆಯೋ, ರೋಗದ ಕುರಿತು ಬೀಳುವ ಭಯದ ಮನಸ್ಥಿತಿಯಿಂದಲೋ ಉಪಶಮನವಾಗುವ ರೋಗಿಗಳ ಸಂಖ್ಯೆ ಅತಿ ಕಡಿಮೆ. ಈ ರೋಗ ಮಕ್ಕಳಲ್ಲಿ ಕಾಣುವ ಕಾರಣಗಳನ್ನು ಹಿನ್ನೆಲೆಗಳನ್ನು ತಿಳಿಸುತ್ತಾ, ದುಷ್ಟ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು, ದುಷ್ಟ ಹವ್ಯಾಸಿಗಳ ಒಡನಾಟ ಮಾಡುವುದು, ಆಹಾರ ಪದ್ಧತಿಗಳು ಕಾರಣವಾಗಬಲ್ಲುದೆಂದು ಮಕ್ಕಳ ಮಟ್ಟಕ್ಕೆ ಅರ್ಥವಾಗುವ ರೀತಿಯಲ್ಲಿ ವಿವರಿಸಿದರು.ಆದಷ್ಟು ದುಷ್ಟ ಹವ್ಯಾಸಗಳಿಂದ ಯುವ ಪೀಳಿಗೆ ದೂರವಿರುವುದು,ಸದಾ ಕ್ರಿಯಾಶಿಲರಾಗಿರುವುದು ಈ ಭಯಂಕರ ರೋಗದಿಂದ ಪಾರಾಗಲು ಯೋಗ್ಯ ಮಾರ್ಗವೆಂದು ತಿಳಿಸಿದರು. ದಿನನಿತ್ಯದ ಚಟುವಟಿಕೆಗಳಲ್ಲಿ ಸರಿಯಾದ ಪದ್ಧತಿ ಆಹಾರದಲ್ಲಿ ಸರಿಯಾದ ಪದ್ಧತಿ, ಮಾನಸಿಕವಾಗಿ ಯಾವುದೇ ಒತ್ತಡ ರಹಿತವಾಗಿ ಇರುವಂತಹದು, ಕಾಲ ಕಾಲಕ್ಕೆ ಯಾವುದೇ ರೋಗಲಕ್ಷಣಗಳು ಕಂಡರೂ ಯೋಗ್ಯ ವೈದ್ಯಕೀಯ ಸಲಹೆಗಳನ್ನು ಪಡೆಯುವುದು ಈ ರೀತಿಯಾದಂತಹ ಎಚ್ಚರಿಕೆ ಕ್ರಮಗಳನ್ನು ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶಶಾಂಕ್ ಹೆಗಡೆ ಇವರು, ವಿದ್ಯಾರ್ಥಿಗಳು ಮೊಬೈಲ್ ಇಂಟರ್ನೆಟ್ ಎಂಬ ಕ್ಯಾನ್ಸರ್ ರೋಗಕ್ಕಿಂತಲೂ ಭಯಂಕರವಾದ ಈ ದುಷ್ಟ ಹವ್ಯಾಸಗಳಿಂದ ದೂರವಿದ್ದು ತಮ್ಮ ಆರೋಗ್ಯವನ್ನು ಕಾಯ್ದುಕೊಂಡು, ಕಲಿಕೆಯನ್ನು ಚೆನ್ನಾಗಿ ಮುಂದುವರಿಸಿಕೊಂಡು ಹೋಗಬೇಕೆಂಬ ಹಾರೈಕೆಯನ್ನು ನೀಡುತ್ತಾ ವಂದನಾರ್ಪಣೆ ನಡೆಸಿಕೊಟ್ಟರು.
ಕಾರ್ಯಕ್ರಮಕ್ಕೆ ಆಗಮಿಸಿದಂತ ಅತಿಥಿಗಳನ್ನು ಇಲ್ಲಿಯೂ ಕ್ಲಬ್ ಅಡ್ವೈಸರ್ ಆದ ಲಯನ್ ಅಶ್ವಥ್ ಹೆಗಡೆ ಇವರು ಸ್ವಾಗತಿಸಿ ಸಭೆಗೆ ಪರಿಚಯಿಸಿದರು.ಲಿಯೋ ಕ್ಲಬ್ ನ ಪದಾಧಿಕಾರಿಗಳಾದ ಅಧ್ಯಕ್ಷರಾದ ಅನನ್ಯ ಹೆಗಡೆ ಕಾರ್ಯದರ್ಶಿಗಳಾದ ಲಿಯೋ ಪೂರ್ವಿ ಶೆಟ್ಟಿ ಇವರುಗಳು ಅತಿಥಿಗಳಿಗೆ ಗೌರವಾರ್ಪಣೆ ನಡೆಸಿಕೊಟ್ಟರು. ಲಿಯೋ ಪ್ರಾರ್ಥನಾ, ವರ್ಷಾ ಹೆಗಡೆ, ಶ್ರೇಯಾ ಭಟ್.. ಪ್ರಾರ್ಥನೆ ನಡೆಸಿಕೊಟ್ಟರು. ಲಿಯೋ ಅಂಕಿತ ರಾಯ್ಬಾಗಿ ಲಿಯೋ ಪ್ರಾರ್ಥನಾ ಪ್ರಸನ್ನ ಹೆಗಡೆ ಇವರುಗಳು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಲಯನ್ಸ್ ಕ್ಲಬ್ಬಿನ ಪದಾಧಿಕಾರಿಗಳಾದ ಲಯನ್ ಗುರುರಾಜ್ ಹೊನ್ನಾವರ,ಲಿಯೋ ಮಾರ್ಗದರ್ಶಿ ಶಿಕ್ಷಕರಾದ ಶ್ರೀಮತಿ ಸೀತಾ ವಿ.ಭಟ್, ಶಾಲೆಯ ಶಿಕ್ಷಕ ವೃಂದ, ಶಿಕ್ಷಕೇತರ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.