Slide
Slide
Slide
previous arrow
next arrow

ಸಮಾಜ ಸೇವೆ ದೊಡ್ಡ ಜವಾಬ್ದಾರಿ: ಅಜಯ್ ಭಂಡಾರಕರ್

300x250 AD

ಹೊನ್ನಾವರ: ಸಮಾಜ ಸೇವೆ ಆಯ್ದುಕೊಳ್ಳುವುದೇ ಒಂದು ದೊಡ್ಡ ಜವಾಬ್ದಾರಿಯಾಗಿದೆ. ಸಮಾಜಕ್ಕೆ ಏನು ಕೊಡುಗೆ ನೀಡಬಹುದೆನ್ನುವುದು ಸಮಾಜ ಕಾರ್ಯ ಶಿಕ್ಷಣ ತಿಳಿಸುತ್ತದೆ. ಬಿ.ಎಸ್‌.ಡಬ್ಲ್ಯೂ ಪದವಿ ಇದಕ್ಕೆ ಪೂರಕವಾಗಿದೆ ಎಂದು ಮಂಕಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಅಜಯ್ ಭಂಡಾರಕರ್ ಹೇಳಿದರು.
ತಾಲೂಕಿನ ಅರೇಅಂಗಡಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಅರೇಅಂಗಡಿಯ ಸಿರಿ ಬಿ.ಎಸ್‌.ಡಬ್ಲ್ಯೂ ಪದವಿ ಕಾಲೇಜು ದಶಮಾನೋತ್ಸವ ಸಂಭ್ರಮದಲ್ಲಿ ಬಿ.ಎಸ್‌.ಡಬ್ಲ್ಯೂ 5ನೇ ಸೆಮಿಸ್ಟರ್‌ನ ಪಠ್ಯಕ್ರಮದಂತೆ ಕಾಲೇಜಿನಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಗ್ರಾಮೀಣ ಸಮಾಜ ಕಾರ್ಯ ತರಬೇತಿ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸೇವೆ ಎನ್ನುವುದು ವಿಭಿನ್ನ ರೀತಿಯಲ್ಲಿರುತ್ತದೆ. ಸಮಾಜ ಸೇವೆ ಹೇಗೆಲ್ಲ ಮಾಡಬಹುದು ಎನ್ನುವ ಹೊಸ ಹೊಸ ಆವಿಷ್ಕಾರವಾಗಬೇಕು. ಆಳವಾದ ಅಧ್ಯಯನ ಅಗತ್ಯ. ಕಲಿಕೆ ಎನ್ನುವುದು ನಿರಂತರವಾಗಿದೆ. ಯುವಸಮುದಾಯ ಸಮಾಜ ಕಾರ್ಯದಲ್ಲಿ ಹೆಚ್ಚು ಆಶಕ್ತಿ ಹೊಂದಬೇಕು. ಬಿ.ಎಸ್‌.ಡಬ್ಲ್ಯೂ ಶಿಕ್ಷಣ ಅನೇಕ ಉದ್ಯೋಗ ಅವಕಾಶಗಳನ್ನು ತೆರೆದುಕೊಡುತ್ತದೆ ಎಂದು ಶಿಬಿರಕ್ಕೆ ಶುಭಕೋರಿದರು.
ನೆಲ್ಲಿಕೇರಿ ಪದವಿ ಪೂರ್ವ ಕಾಲೇಜಿನ ಅಧ್ಯಾಪಕ ಎಸ್.ಎಮ್.ನಾಯ್ಕ ಮಾತನಾಡಿ, ಈ ಕೋರ್ಸ್ ನ ಬಗ್ಗೆ ಇನ್ನೂ ವಿದ್ಯಾರ್ಥಿಗಳಲ್ಲಿ, ಪಾಲಕರಲ್ಲಿ ಅರಿವಿಲ್ಲ. ಇಂತಹ ಅತ್ಯುತ್ತಮವಾದ ಶಿಕ್ಷಣ ಪಡೆಯುತ್ತಿರುವುದಕ್ಕೆ ವಿದ್ಯಾರ್ಥಿಗಳು ಹೆಮ್ಮೆ ಪಡಬೇಕು. ಸಮಾಜ ಸೇವೆ ಎನ್ನುವುದು ಮಾನವನ ಮೂಲ ಕರ್ತವ್ಯವಾಗಿದೆ. ಇದರಲ್ಲಿ ಮಾನವೀಯತೆ ಅಡಕವಾಗಿದೆ. ಸಮಾಜಸೇವೆಗೆ ಹಾಗೂ ಇತರ ಉದ್ಯೋಗಕ್ಕೆ ಸಿಗುವ ಗೌರವದಲ್ಲಿ ವ್ಯತ್ಯಾಸವಿದೆ. ಮಹಾನ್ ನಾಯಕರುಗಳಾದವರು ಸಮಾಜ ಕಾರ್ಯ ಶಿಕ್ಷಣ ಪಡೆದವರಿದ್ದಾರೆ. ಈ ಶಿಕ್ಷಣವನ್ನು ಪಡೆದು ಸದ್ಬಳಕೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿರಿ ಬಿ.ಎಸ್‌.ಡಬ್ಲ್ಯೂ ಪದವಿ ಕಾಲೇಜಿನ ಪ್ರಾಂಶುಪಾಲ ಅರುಣ್ ನಾಯ್ಕ ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡಬೇಕಾದರೆ ಯೋಗ್ಯ ಶಿಕ್ಷಣದ ಅವಶ್ಯಕತೆ ಇದೆ. ಇದನ್ನು ಬಿ.ಎಸ್‌.ಡಬ್ಲ್ಯೂ ಪದವಿಯಲ್ಲಿ ಪಡೆಯಬಹುದಾಗಿದೆ. ಈ ಕೋರ್ಸ್ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಸಮಾಜ ಕಲ್ಯಾಣಗೊಳಿಸುವಲ್ಲಿ ಯಶಸ್ವಿಯಾಗಬೇಕು. ಪಠ್ಯಕ್ರಮದಂತೆ ಪ್ರತಿವರ್ಷವು ಗ್ರಾಮೀಣ ಸಮಾಜ ಕಾರ್ಯ ಶಿಬಿರ ನಡೆಯುತ್ತಿದ್ದು, ಈ ವರ್ಷವು ನಾಲ್ಕು ದಿನಗಳ ಕಾಲ ನಡೆಯಲಿದೆ ಎಂದರು.
ವೇದಿಕೆಯಲ್ಲಿ ಸ್ಪಂದನಾ ಸೇವಾ ಸಂಸ್ಥೆಯ ಗಣಪತಿ ಹೆಗಡೆ, ಪತ್ರಕರ್ತ ನಾಗರಾಜ ನಾಯ್ಕ ಖರ್ವಾ, ವಿದ್ಯಾರ್ಥಿ ಪ್ರತಿನಿಧಿ ಮಲ್ಲಿಕಾರ್ಜುನ ನಾಯ್ಕ ಉಪಸ್ಥಿತರಿದ್ದರು. ಶಿಬಿರಾರ್ಥಿ ರಾಘವೇಂದ್ರ ಗಾವಡಿ ಸ್ವಾಗತಿಸಿದರು. ಲತಾ ಗೌಡ ನಿರೂಪಿಸಿದರು. ಮಣಿಕಂಠ ಪಟಗಾರ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top