ದಾಂಡೇಲಿ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಟೌನ್ ಶಿಪ್ ನ ಸೈಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 4ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ರೈಸಿಂಗ್ ಸ್ಟಾರ್ಸ್ ಡೇ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಶನಿವಾರ ಸಂಭ್ರಮ, ಸಡಗರದಿಂದ ಜರುಗಿತು.
ತಹಶೀಲ್ದಾರ್ ಶೈಲೇಶ ಪರಮಾನಂದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಶಾಲೆಗಳ ಪಾತ್ರ ಮಹತ್ವಪೂರ್ಣವಾಗಿದೆ. ಕಲಿಕೆಯ ಜೊತೆಗೆ ಜೀವನ ವ್ಯಕ್ತಿತ್ವ, ಸನ್ನಡತೆಗಳನ್ನು ಇಲ್ಲಿ ಬೋಧನೆ ಮಾಡಲಾಗುತ್ತಿರುವುದು ಅತ್ಯುತ್ತಮವಾದ ಕಾರ್ಯ. ಗುಣಮಟ್ಟದ ಶಿಕ್ಷಣ ಹಾಗೂ ಸಕಲ ಮೂಲಸೌಕರ‍್ಯಗಳ ವ್ಯವಸ್ಥೆಯ ಮೂಲಕ ತಾಲೂಕಿನ ಶೈಕ್ಷಣಿಕ ಕ್ಷೇತ್ರಕ್ಕೆ ಸೈಂಟ್ ಮೈಕಲ್ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯ ಕೊಡುಗೆ ಅಪಾರವಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭ ಕೋರಿದರು.
ಸೇಂಟ್ ಅಂಥೋನಿ ಚರ್ಚಿನ ಧರ್ಮಗುರುಗಳಾದ ರೆ.ಫಾ.ಫೆಲಿಕ್ಸ್ ಲೋಬೋ, ಸೇಂಟ್ ಮೈಕೆಲ್ ಕಾನ್ವೆಂಟ್ ಶಾಲೆಯ ಶಿಕ್ಷಕ ವೃಂದ ಅತ್ಯುತ್ತಮವಾಗಿ ಬೋಧನಾ ಕ್ರಮವನ್ನು ಅಳವಡಿಸಿಕೊಂಡ ಹಿನ್ನೆಲೆಯಲ್ಲಿ ಕಲಿಕೆಯಲ್ಲಿ ಸದಾ ಅಗ್ರ ಸ್ಥಾನದಲ್ಲಿದೆ. ಇದೇ ಗುಣಮಟ್ಟ ಸದಾ ಮುಂದುವರಿಯಲೆಂದು ಶುಭ ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಕ್ಲೇರೆಟ್ ಬಿ.ಎಸ್. ಮಾತನಾಡಿ, ಶಾಲೆಯ ಪ್ರತಿಯೊಂದು ಚಟುವಟಿಕೆಗಳಿಗೂ ವಿದ್ಯಾರ್ಥಿಗಳ ಪಾಲಕರು ನೀಡುತ್ತಿರುವ ಸಹಕಾರ ಅತ್ಯಂತ ಸ್ಮರಣೀಯವಾಗಿದೆ. ಅದೇ ರೀತಿ ಶಿಕ್ಷಕ ವೃಂದ ಮತ್ತು ಬೋಧಕೇತರ ಸಿಬ್ಬಂದಿಗಳ ಸಮನ್ವಯತೆಯ ಸಹಕಾರ ಶಾಲೆಯ ಉನ್ನತಿಗೆ ಬಹುಮೂಲ್ಯ ಕೊಡುಗೆ ನೀಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇಂಟ್ ಮೈಕೆಲ್ ಕಾನ್ವೆಂಟ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸೆಲ್ವಿ ಬಿ.ಎಸ್. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೇಂಟ್ ಅಂಥೋನಿ ಚರ್ಚಿನ ಸಹಾಯಕ ಧರ್ಮಗುರು ರೆ.ಫಾ.ಮಾರ್ಕ್ ಫರ್ನಾಂಡಿಸ್, ಶಾಲೆಯ ಮುಖ್ಯಾಧಿಕಾರಿ ವೀಣಾ.ಬಿ.ಎಸ್, ವಿದ್ಯಾರ್ಥಿಗಳ ಪಾಲಕರ ಸಂಘದ ಉಪಾಧ್ಯಕ್ಷ ರಾಹುಲ್ ಬಾವಾಜಿ, ಪ್ರಭಾರಿ ಮುಖ್ಯೋಪಾಧ್ಯಾಯಿನಿ ವಿನುತಾ ಡಯಾಸ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪ್ರಾರ್ಥನೆಯಿಂದ ಆರಂಭಗೊAಡ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳೆ ಸ್ವಾಗತ ಕೋರಿದರು. ಶಿಕ್ಷಕಿಯರಾದ ಜ್ಯೂಲಿಯನಾ ಮಂಥೆರೊ ವಂದಿಸಿದ ಕಾರ್ಯಕ್ರಮಕ್ಕೆ ಫಿಲೋಮಿನಾ ಎ.ಫರ್ನಾಂಡೀಸ್ ಮತ್ತು ಪ್ರಿಯಾ ಎ.ಡಯಾಸ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸೀತರಾಮ ನಾಯ್ಕ ಸೇರಿದಂತೆ ಶಾಲೆಯ ಶಿಕ್ಷಕ ವೃಂದದವರು ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಬಹುಮಾನವನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ಜರುಗಿ ಜನಾಕರ್ಷಣೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.