ಸಿದ್ದಾಪುರ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಹುಮ್ಮಸ್ಸು, ಉತ್ಸಾಹದ ಮನೋಭಾವ ಹೆಚ್ಚಾಗುತ್ತದೆ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.
ತಾಲೂಕಿನ ಬೇಡ್ಕಣಿಯ ಶ್ರೀ ಕೋಟೆ ಹನುಮಂತ ದೇವಾಲಯ ಆಡಳಿತ ಸೇವಾ ಸಮಿತಿ ಹಾಗೂ ಶ್ರೀ ಕೋಟೆ ಹನುಮಂತ ಪ್ರತಿಷ್ಠಾನ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು ಸಮಾಜದಲ್ಲಿ ಕಡು ಬಡತನದಲ್ಲಿ ಬೆಳೆದ ಒಳ್ಳೆಯ ವಿದ್ಯಾವಂತರಿದ್ದಾರೆ, ಅವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಶ್ಲಾಘನೀಯ. ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಸಮಾಜದ ವಿದ್ಯಾರ್ಥಿಗಳಲ್ಲಿ ತಾವು ಓದಿ ಹೆಚ್ಚು ಅಂಕ ಪಡೆದು ನಾವು ಸನ್ಮಾನಿತರಾಗಬೇಕೆಂದು ಮನೋಭಾವ ಬೆಳೆಯುತ್ತದೆ ಇದರೊಂದಿಗೆ ಪಾಲಕರ ಪ್ರೋತ್ಸಾಹವು ಕೂಡ ಅತ್ಯಗತ್ಯ. ಸಮಾಜದ ಯುವಜನತೆಗೆ ಒಂದು ಉತ್ತಮ ಸಂದೇಶ ನೀಡಿದಂತಾಗುತ್ತದೆ ಹಾಗೂ ಯುವಜನತೆ ದುಶ್ಚಟಗಳಿಂದ ದೂರವಿರಬೇಕು. ಸಮಾಜಮುಖಿಯಾಗಿ ಒಳ್ಳೆಯ ಕಾರ್ಯಮಾಡಬೇಕು. ಯುವಕರು ನಿರಂತರ ಸಮಾಜ ಸೇವೆಗೆ ಮುಂದಾಗಬೇಕು ಎಂದು ಹೇಳಿದರು.
ಉಪೇಂದ್ರ ಪೈ ಅವರು ಶ್ರೀ ಕೋಟೆ ಆಂಜನೇಯ ದೇವಸ್ಥಾನದ ಸಮಿತಿಯ ಅಧ್ಯಕ್ಷ ವಿ. ಎನ್. ನಾಯ್ಕ ಬೇಡ್ಕಣಿ ಅವರಿಗೆ ತಮ್ಮ ಟ್ರಸ್ಟ್ ವತಿಯಿಂದ ಚೆಕ್ ಮುಖಾಂತರ 1,00,001 ರೂಪಾಯಿಗಳನ್ನು ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕಾಗಿ ದೇಣಿಗೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಿ. ಎನ್. ನಾಯ್ಕ ಬೇಡ್ಕಣಿ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವೈದಿಕರಿಗೆ ಹಾಗೂ ಹಿರಿಯ ಸೇವಾಕರ್ತ ಸಾಧಕರಿಗೆ, ಪುರಸ್ಕೃತರಿಗೆ ಗೌರವಾರ್ಪಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಜಿ.ಕೆ. ನಾಯ್ಕ, ಎಸ್.ಕೆ. ಹೆಗಡೆ, ನಾಗರಾಜ್ ಎಮ್., ದೇವಸ್ಥಾನ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಗಳು, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು