ಹೊನ್ನಾವರ: ತಾಲೂಕಿನ ಕುಚ್ಚೋಡಿ ಅರಣ್ಯ ಸರ್ವೆ ನಂ.7ರಲ್ಲಿನ ಎರಡು ಸಾಗವಾನಿ ಮರಗಳನ್ನು ಕಡಿದು ವಾಹನದಲ್ಲಿ ಸಾಗಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ.
ಭಟ್ಕಳ ಉಪವಿಭಾಗ, ಹೊನ್ನಾವರ ವಿಭಾಗದ ಮಂಕಿ ವಲಯ ವ್ಯಾಪ್ತಿಯಲ್ಲಿ ಕೆಲದಿನಗಳ ಹಿಂದೆ ನಾಟಾ ಸಾಗಾಟ ಪ್ರಕರಣ ನಡೆದಿತ್ತು. ಆರೋಪಿತರಾದ ಮಂಕಿ ಬಂಡಿಬೈಲ್ ನಿವಾಸಿ ವಿಘ್ನರಾಜ ನಾಯ್ಕ, ಕೆಳಗಿನ ಇಡಗುಂಜಿಯ ಗಂಗಾಧರ ಆಚಾರಿ ಅವರನ್ನು ಈ ಹಿಂದೆ ವಾಹನ ಜಪ್ತಿಪಡಿಸಿ ಬಂಧಿಸಲಾಗಿತ್ತು. ಈ ಕೃತ್ಯದಲ್ಲಿ ಭಾಗಿಯಾಗಿ ನಾಪತ್ತೆಯಾಗಿರುವ ಆರೋಪಿತನಾದ ಮಂಕಿ ಖಾಜಿಮನೆ ನಿವಾಸಿ ಕಮಲಾಕರ ನಾಯ್ಕ ಈತನು ಮಹಾರಾಷ್ಟ್ರ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ. ಅರಣ್ಯ ಇಲಾಖಾ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಮಹಾರಾಷ ರಾಜ್ಯಕ್ಕೆ ಹೋಗಿ ಸಾವಂತವಾಡಿ ಡಿಸಿಎಫ್ ಎಸ್.ಎನ್.ರೆಡ್ಡಿ, ಆರ್‌ಎಫ್‌ಓ ಅಮೃತ ಶಿಂಧೆ, ಡಿಆರ್‌ಎಫ್‌ಓ ಎಸ್.ಪಿ.ಪರಿಟ, ಸಾವಳ ಕಾಂಬ್ಳೆ, ಮಹೇಶ ಪಾಟೀಲ, ದತ್ತಗುರು ಪಿಳಂಕರ ಇವರ ಸಹಯೋಗದಿಂದ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿತನಾದ ಕಮಲಾಕರ ನಾಯ್ಕನನ್ನು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವನ್ ತಾಲೂಕಿನಲ್ಲಿ ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಡಿಸಿಎಫ್ ರವಿಶಂಕರ, ಎಸಿಎಫ್ ಕೆ.ಟಿ.ಬೋರಯ್ಯ, ಮಂಕಿ ಆರ್‌ಎಫ್‌ಓ ಸವಿತಾ ಆರ್.ದೇವಾಡಿಗ, ಡಿಆರ್‌ಎಫ್‌ಓ ಯೋಗೇಶ ಮೊಗೇರ, ಸಂದೀಪ ಎಸ್.ಅರ್ಕಸಾಲಿ, ಶಿವಾನಂದ ಇಂಚಲ, ಮಹಾದೇವ ಎಮ್.ಮಡ್ಡಿ, ಅರಣ್ಯ ರಕ್ಷಕರಾದ ಸುರೇಂದ್ರನಾಥ ಜಿ.ನಾಯ್ಕ, ಶಿವಾನಂದ ಪೂಜಾರಿ, ಬಸವರಾಜ ಲಮಾಣಿ, ಬಸಯ್ಯ ಸಂಕಣ್ಣವರ ಹಾಗೂ ಅರಣ್ಯ ಕಾವಲುಗಾರ ಈಶ್ವರ ನಾಯ್ಕ ಪಾಲ್ಗೊಂಡಿದ್ದರು.