ಕುಮಟಾ: ವಿಧಾನಸಭಾ ಚುನಾವಣೆಯ ತಯಾರಿಯಲ್ಲಿರುವ ಕಾಂಗ್ರೆಸ್ ಪಕ್ಷ ಈ ಬಾರಿ ಟಿಕೇಟ್ ನಿರೀಕ್ಷೆಯಲ್ಲಿರುವವರಿಂದ ಅರ್ಜಿ ಹಾಕಿಸಿಕೊಂಡಿದೆ. ಇದಲ್ಲದೇ ಅರ್ಜಿ ಹಾಕಿದವರಿಗೆ ಮಾತ್ರ ಟಿಕೇಟ್ ನೀಡಲಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ನಾಯಕರುಗಳಿಗೆ ಅರ್ಜಿ ಹಾಕದಿದ್ದರೂ ಟಿಕೇಟ್ ನೀಡಲಾಗುತ್ತದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಶಾಕ್ ನೀಡಿದಂತಾಗಿದೆ.
ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಕ್ಷೇತ್ರಗಳಲ್ಲಿ ಟಿಕೇಟ್ ಆಕಾಂಕ್ಷಿಗಳು ಎರಡು ಲಕ್ಷ ಡಿಡಿಯನ್ನ ಹಾಗೂ ಅರ್ಜಿ ಶುಲ್ಕ 5 ಸಾವಿರ ರೂಪಾಯಿ ಹಣವನ್ನ ಪಕ್ಷಕ್ಕೆ ಸಲ್ಲಿಸಲು ಸೂಚಿಸಿದ್ದು ನವೆಂಬರ್ 21 ರಂದು ಕೊನೆಯ ದಿನವಾಗಿತ್ತು. ರಾಜ್ಯದಲ್ಲಿ 224 ಕ್ಷೇತ್ರಕ್ಕೆ ಸುಮಾರು 1200ಕ್ಕೂ ಅಧಿಕ ಜನರು ಟಿಕೇಟ್ ಗಾಗಿ ಅರ್ಜಿಯನ್ನ ಹಾಕಿದ್ದರು. ಇನ್ನು ಅರ್ಜಿ ಹಾಕಿದವರಿಗೆ ಮಾತ್ರ ಟಿಕೇಟ್ ನೀಡಲಾಗುವುದು ಎನ್ನುವ ನಿರೀಕ್ಷೆಯಲ್ಲಿ ಕೆಲವು ನಾಯಕರುಗಳಿದ್ದರು. ಆದರೆ ಗುರುವಾರ ಕುಮಟಾ ಪಟ್ಟಣದಲ್ಲಿ ನಡೆದ ಜನಜಾಗೃತಿ ಸಮಾವೇಶದ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಿಕೇಟ್‌ಗಾಗಿ ಅರ್ಜಿ ಹಾಕದವರಿಗೆ ಟಿಕೇಟ್ ಕೊಡುವ ಬಗ್ಗೆ ವರಿಷ್ಠರ ಜೊತೆ ಚರ್ಚೆ ನಡೆಸಲಾಗುವುದು ಎಂದಿದ್ದಾರೆ.
ಪಕ್ಷಕ್ಕೆ ಇನ್ನು ಹಲವರು ಸೇರಲಿದ್ದಾರೆ. ಹಾವೇರಿಯಲ್ಲಿ ಬಣಗಾರ್ ಕಾಂಗ್ರೆಸ್ ಸೇರಿದ್ದಾರೆ. ಇದಲ್ಲದೇ ಮುಂಡಗೋಡಿನಲ್ಲಿ ವಿ.ಎಸ್ ಪಾಟೀಲ್ ಮಾತ್ರ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೆ ಯಾರ್ಯಾರು ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿಯಲಿದೆ ಎಂದಿದ್ದಾರೆ. ಇನ್ನು ಅರ್ಜಿ ಹಾಕಿದವರಿಗೆಲ್ಲಾ ಸದ್ಯ ಸಂಘಟನೆ ಕ್ಷೇತ್ರದಲ್ಲಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಈ ಬಾರಿ ಟಿಕೇಟ್‌ಗಾಗಿ ನೂಕು ನುಗ್ಗಲಿರುವುದರಿಂದ ಶೀಘ್ರವೇ ಘೋಷಣೆ ಮಾಡುವ ಬಗ್ಗೆ ಸಹ ಚರ್ಚೆ ನಡೆಯುತ್ತಿದೆ ಎಂದು ಶಿವಕುಮಾರ್ ಹೇಳಿದ್ದಾರೆ.
ಸದ್ಯ ಮುಂಡಗೋಡ ಕ್ಷೇತ್ರದಲ್ಲಿ ಒಬ್ಬರೇ ಆಕಾಂಕ್ಷಿ ಟಿಕೇಟ್‌ಗಾಗಿ ಅರ್ಜಿ ಹಾಕಿದ್ದು, ಮಾಜಿ ಶಾಸಕ ವಿ.ಎಸ್ ಪಾಟೀಲ್ ರ ಕಾಂಗ್ರೆಸ್ ಸೇರ್ಪಡೆಯ ನಂತರ ಮತ್ತೊಮ್ಮೆ ಅರ್ಜಿ ಹಾಕಿಸಿಕೊಂಡು ಟಿಕೇಟ್ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಲ್ಲದೇ ಜಿಲ್ಲೆಯ ಕರಾವಳಿ ಭಾಗದಲ್ಲಿ ಇಬ್ಬರು ಪ್ರಭಾವಿ ಮುಖಂಡರುಗಳು ಕಾಂಗ್ರೆಸ್ ಸೇರಲು ತಯಾರಿ ನಡೆಸುತ್ತಿದ್ದು ಈಗಾಗಲೇ ನಾಯಕರುಗಳ ಜೊತೆ ಸಹ ಚರ್ಚೆ ನಡೆಸಿದ್ದು ಒಂದೊಮ್ಮೆ ಹೈ ಕಮಾಂಡ್ ಸಮ್ಮತಿ ನೀಡಿದರೆ ಟಿಕೇಟ್ ನಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಸಹ ಇದೆ ಎನ್ನಲಾಗಿದೆ.
ಶಿರಸಿ ಕ್ಷೇತ್ರದಿಂದ ಟಿಕೇಟ್‌ಗಾಗಿ ಏಳು ಜನ ಮುಖಂಡರುಗಳು ಅರ್ಜಿಯನ್ನು ಹಾಕಿದ್ದಾರೆ. ಇದರ ನಡುವೆ ಕ್ಷೇತ್ರದಲ್ಲಿ ಟಿಕೇಟನ್ನು ಅರ್ಜಿ ಹಾಕದೇ ಇರುವ ನಾಯಕರಿಗೆ ನೀಡಲಾಗುತ್ತದೆಯೇ ಎನ್ನುವ ಚರ್ಚೆ ಕ್ಷೇತ್ರದಲ್ಲಿ ನಡೆಯುತ್ತಿದೆ. ಈಗಾಗಲೇ ಶಿರಸಿಯಲ್ಲಿ ಹಲವು ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡ ಮುಖಂಡರೋರ್ವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಕೊಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಆಪ್ತರೂ ಆಗಿರುವ ನಾಯಕರಿಗೆ ಶಿರಸಿ ಕ್ಷೇತ್ರದಲ್ಲಿ ತನ್ನದೇ ಆದ ಹಿಡಿತವಿದ್ದು, ಸಾರ್ವಜನಿಕರ ಜೊತೆ ಸಹ ಉತ್ತಮ ಸಂಬಂಧ ಹೊಂದಿರುವ ನಿಟ್ಟಿನಲ್ಲಿ ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕಲು ಅವರಿಗೆ ಟಿಕೇಟ್ ಕೊಡುವ ಬಗ್ಗೆ ಚಿಂತನೆಯನ್ನ ಸಹ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಟಿಕೇಟ್‌ಗಾಗಿ ಅರ್ಜಿ ಸಲ್ಲಿಸಿದರುವ ತಮಗೆ ಟಿಕೇಟ್ ಕೊಡಬೇಕು ಎಂದು ದೊಡ್ಡ ಲಾಭಿಯನ್ನ ನಡೆಸುತ್ತಿದ್ದಾರೆ. ಹಾಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನ ಸೋಲಿಸಲು ಕಾಂಗ್ರೆಸ್ ಯಾರಿಗೆ ಟಿಕೇಟ್ ನೀಡಲಿದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.