ಹೊನ್ನಾವರ: ತಾಲೂಕಿನ ಕರ್ಕಿ ಗ್ರಾ.ಪಂ. ವ್ಯಾಪ್ತಿಯ ಪಾವಿನಕುರ್ವಾದಲ್ಲಿ 50 ಲಕ್ಷ ವೆಚ್ಚದ ತಡೆಗೋಡೆ ದುರಸ್ತಿ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ವತಿಯಿಂದ ಕರ್ಕಿ ಗ್ರಾ.ಪಂ. ವ್ಯಾಪ್ತಿಯ ಪಾವಿನಕುರ್ವಾದ ತೂಗುಸೇತುವೆಯ ಸಮೀಪದ 2.80 ಕಿ.ಮೀ. ವ್ಯಾಪ್ತಿಯ ತಡೆಗೋಡೆ ದುರಸ್ತಿಯ 50 ಲಕ್ಷ ವೆಚ್ಚದ ಕಾಮಗಾರಿ ಇದಾಗಿದೆ. ಇದು ಗ್ರಾಮದ ಬಹುವರ್ಷದ ಬೇಡಿಕೆಯಾಗಿದ್ದು, ಉಪ್ಪು ನೀರು ನುಗ್ಗಿ ಪ್ರತಿವರ್ಷ ರೈತರು ಸಮಸ್ಯೆ ಅನುಭವಿಸುತ್ತಿದ್ದರು. ಇದರಿಂದ ಗ್ರಾಮಸ್ಥರು ಹಲವು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇದೀಗ ಯೋಜನೆ ಮಂಜೂರಾಗಿದ್ದು, ಶಂಕುಸ್ಥಾಪನೆಯನ್ನು ಶಾಸಕರು ನೇರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಶೆಟ್ಟಿ, ಈ ಭಾಗದಲ್ಲಿ ಕಡಲ್ಕೊರೆತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಡೆಗೋಡೆ ನಿರ್ಮಾಣಕ್ಕೆ ಚಿಕ್ಕ ನೀರಾವರಿ ಸಚಿವರಾದ ಮಾಧುಸ್ವಾಮಿಯವರು ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿದ್ದಾರೆ. ಕ್ಷೇತ್ರಕ್ಕೆ 100 ಕೋಟಿ ಅನುದಾನ ಬಿಡುಗಡೆಯಾಗಿ ಟೆಂಡರ್ ಆಗಿದೆ. 76 ಕೋಟಿ ಮಂಜೂರು ಆಗಿದೆ. ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಖಾರ್ಲ್ಯಾಂಡ್ ಯೋಜನೆ ಜಾರಿಗೊಳಿಸಿದ್ದರು. ಆ ನಂತರದ ಸರ್ಕಾರಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಇದೀಗ ಬಿಜೆಪಿ ಸರ್ಕಾರ ಅನುದಾನ ನೀಡಿದೆ. ಇದರಿಂದ ಉಪ್ಪು ನೀರು ಗದ್ದೆಗೆ ನುಗ್ಗುವುದು ತಪ್ಪಲಿದ್ದು, ಖಾರ್ಲ್ಯಾಂಡ್ ನಿರ್ಮಿಸಿ ಉಪ್ಪು ನೀರಿನಲ್ಲಿ ಸಿಗಡಿ ಬೆಳೆಯುವ ಮೂಲಕ ರೈತರಿಗೂ ಅನೂಕೂಲವಾಗಲಿದೆ. ಜಿಲ್ಲೆಗೆ 600 ಕೋಟಿ ಅನುದಾನ ತಡೆಗೋಡೆ ನಿರ್ಮಾಣಕ್ಕೆ ಸರ್ಕಾರ ಬಿಡುಗಡೆ ಮಾಡಿದ್ದು, 300 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಯ ಟೆಂಡರ್ ಮುಗಿದ್ದು ಕೆಲಸ ಪ್ರಗತಿಯಲ್ಲಿದೆ. ಸ್ಥಳಿಯ ಜನಪ್ರತಿನಿಧಿಗಳು, ಸಾರ್ವಜನಿಕರು ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಸಿ, ವಿಳಂಬ ಅಥವಾ ಕಳಪೆ ಕಾಮಗಾರಿ ನಡೆದರೆ ನನ್ನ ಗಮನಕ್ಕೆ ತಂದರೆ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸುವುದಾಗಿ ತಿಳಿಸಿದರು.
ಯೋಜನೆ ಆರಂಭವಾಗಿರುವುದಕ್ಕೆ ಶಾಸಕ ದಿನಕರ ಶೆಟ್ಟಿ ಮತ್ತು ಗ್ರಾ.ಪಂ. ಅಧ್ಯಕ್ಷೆ ಕಲ್ಪನಾ ಪ್ಲೋರಾ ಅವರನ್ನು ಕರ್ಕಿ ಜ್ಞಾನೇಶ್ವರಿ ಮಠದಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಕಲ್ಪನಾ ಪ್ಲೋರಾ, ಉಪಾಧ್ಯಕ್ಷೆ ಪೂರ್ಣಿಮಾ ಹೆಗಡೆ, ಸದಸ್ಯರಾದ ಗಜಾನನ ನಾಯ್ಕ, ಹರೀಶ ನಾಯ್ಕ, ಸುಮಿತ್ರಾ ಮೇಸ್ತ, ಇಲಾಖೆಯ ಅಧಿಕಾರಿ ಅಮೀತಾ, ಯೋಗೀಶ ರಾಯ್ಕರ್, ಹರೀಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.