ಹಳಿಯಾಳ: ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ರ‍್ಸೆಟಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರವಾರ ಇವರ ಸಹಯೋಗದೊಂದಿಗೆ ಸ್ವ-ಸಹಾಯ ಗುಂಪಿನ ಸದಸ್ಯರಿಗೆ ಆಯೋಜಿಸಲಾದ 3 ದಿನಗಳ ಉದ್ಯಮಶೀಲತಾ ತರಬೇತಿಯ ಸಮಾರೋಪ ಸಮಾರಂಭ ಜರುಗಿತು. ಅಮೃತ್ ಯೋಜನೆಯಡಿಯಲ್ಲಿ ಬೀಜ ಧನ ಸಹಾಯ ಪಡೆದ ಫಲಾನುಭವಿ ಮಹಿಳಾ ಸ್ವ-ಸಹಾಯ ಗುಂಪುಗಳ ಪ್ರತಿನಿಧಿಗಳಿಗೆ ಈ ತರಬೇತಿಯನ್ನು ಆಯೋಜಿಸಲಾಗಿತ್ತು. ಶಿರಸಿ ಮತ್ತು ಮುಂಡಗೋಡ ತಾಲ್ಲೂಕಿನಿಂದ 25 ಸದಸ್ಯರು ಈ ತರಬೇತಿಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೆ ಹಳಿಯಾಳ ತಾಲ್ಲೂಕಾ ಶಿಶು ಅಭಿವೃದ್ಧಿ ಇಲಾಖೆಯ ಸಿ.ಡಿ.ಪಿ.ಓ ಡಾ. ಲಕ್ಷ್ಮೀದೇವಿ ಮುಖ್ಯ ಅತಿಥಿಯಾಗಿ ಆಗಮಿಸಿ, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು. ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರು ಕೇವಲ ವೈಯಕ್ತಿಕವಾಗಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೇ, ಸಂಘದ ಮೂಲಕ ಆರ್ಥಿಕ ಸಬಲತೆಯನ್ನು ಹೊಂದಬೇಕು ಎಂದು ಕರೆ ನೀಡಿದರು.
ಸಂಘದ ಅಭಿವೃದ್ಧಿಗಾಗಿ, ಸಂಘಗಳಿಗೆ ಬ್ಯಾಂಕ್ ಮೂಲಕ ಧನ ಸಹಾಯ ದೊರಕಲೆಂದೇ ಅಮೃತ್ ಯಜನೆಯಡಿಯಲ್ಲಿ ಬೀಜ ಧನ ಸಹಾಯವನ್ನು ಒದಗಿಸಲಾಗಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಬೀಜ ಧನದ ಸಹಾಯವನ್ನು ಬ್ಯಾಂಕುಗಳಿಗೆ ಗ್ಯಾರಂಟಿ ರೂಪದ ಹಣವನ್ನಾಗಿ ಬಳಸಿಕೊಂಡು, ಆ ಮೂಲಕ ಸಾಲ ಸೌಲಭ್ಯ ಪಡೆದು, ಆಹಾರ ಉತ್ಪಾದನೆ, ಕೋಳಿಸಾಕಣೆಯಂತಹ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಸಂಘದ ಮೂಲಕ ಕೈಗೊಂಡಾಗ ಆರ್ಥಿಕವಾಗಿ ಸಬಲತೆ ಹೊಂದುವುದರೊಂದಿಗೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳನ್ನೂ ಸೃಷ್ಟಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರವನ್ನು ಸಂಸ್ಥೆಯ ಉಪನ್ಯಾಸಕ ಮಂಜುನಾಥ ಲಕಮನಹಳ್ಳಿ ನೆರವೇರಿಸಿ, ಎಲ್ಲರಿಗೂ ಸ್ವಾಗತ ಕೋರಿದರು. ಉಪನ್ಯಾಸಕ ಸುನೀಲ ದೊಡ್ಡಮನಿ ಅವರು ವಂದನಾರ್ಪನೆ ನೆರವೇರಿಸಿ ಶುಭ ಕೋರಿದರು.