ಹೊನ್ನಾವರ: ತಾಲೂಕಿನ ಸರಳಗಿ ಕದಂಬ ಸೈನ್ಯದ 11ನೇ ವರ್ಷದ ಸ್ನೇಹ ಸಮ್ಮೇಳನ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭ ಉಪ್ಪಾರ ಸಮಾಜ ಮಂದಿರದ ಆವಾರದಲ್ಲಿ ನಡೆಯಿತು.
ಶಾಸಕ ಸುನೀಲ್ ನಾಯ್ಕ ಕಾಯಕ್ರಮ ಕಾಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಗೆ ಮಾದರಿಯಾದ ಕಾರ್ಯಕ್ರಮವಾಗಿದೆ. ಇತಿಹಾಸ ಎನ್ನುವುದು ಮನರಂಜನೆಗಿಟ್ಟ ವಸ್ತುವಲ್ಲ. ಜೀವನ ಪರ್ಯಂತ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಪ್ರತಿಯೊಬ್ಬರು ಕನ್ನಡ ನಮ್ಮದೆನ್ನುವ ಭಾವ ಹೊಂದಬೇಕು. ಕನ್ನಡದ ಬಗ್ಗೆ ಅಪಸ್ವರ ಬಂದಾಗ ಒಂದಾಗಬೇಕು. ಕನ್ನಡ ರಕ್ಷಣೆ ನಮ್ಮೆಲ್ಲರ ಹೊಣೆ. ಕನ್ನಡ ಮೈಗೂಡಿಸಿಕೊಂಡಾಗ ಗಟ್ಟಿತನ ಕಾಣಲು ಸಾಧ್ಯ ಎಂದರು.
ಮಾಜಿ ಸೈನಿಕರಾದ ವಿನಾಯಕ ನಾಯ್ಕ, ತಿಮ್ಮಪ್ಪ ನಾಯ್ಕ, ಶೈಕ್ಷಣಿಕವಾಗಿ ಸಾಧನೆಗೈದ ರೇವತಿ ಬಾಕಡ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕರಿ ರಮೇಶ್ ಮಂಡ್ಯ ಮಾತನಾಡಿ, ನಾವು ನಮ್ಮ ಗುರುತನ್ನು ಕನ್ನಡಿಗ ಎಂದೇ ಗುರುತಿಸಿಕೊಳ್ಳಬೇಕೆ ವಿನಃ ನಮ್ಮ ಜಾತಿಗಳಿಂದಲ್ಲ.ಕದಂಬ ಸೈನ್ಯ ಕರ್ನಾಟಕದಲ್ಲಿ ಪುನಃ ಕನ್ನಡ ಸ್ಥಾಪನೆಗೆ ಕೆಲಸ ಮಾಡುತ್ತಿದೆ.ಕನ್ನಡಿಗರು ಇಂದು ನಿರಭಿಮಾನಿಗಳಾಗಿರುವುದರಿಂದ ಸಂಕಷ್ಟ ಅನುಭವಿಸುವಂತಾಗಿದೆ. ಇಂದು ಸರ್ಕಾರಿ ಅಧಿಕಾರಿಗಳೆ ಕನ್ನಡ ವಿರೋಧಿಗಳಾಗಿದ್ದರೆ. ಹಿಂದಿ ಭಾಷಿಕರು ಕನ್ನಡ ಆಳುವ ಪರಿಸ್ಥಿತಿ ಬಂದಿದೆ ಎಂದರು.
ವೇದಿಕೆಯಲ್ಲಿ ಉಪ್ಪೋಣಿ ಗ್ರಾ.ಪಂ ಅಧ್ಯಕ್ಷೆ ಮಾದೇವಿ ಉಪ್ಪಾರ, ನಗರಬಸ್ತಿಕೇರಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ ನಾಯ್ಕ,ಹೆರಂಗಡಿ ಗ್ರಾ.ಪಂ ಅಧ್ಯಕ್ಷ ಪ್ರಮೋದ್ ನಾಯ್ಕ, ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ, ಹಿರಿಯ ಪತ್ರಕರ್ತ ಉದಯಕುಮಾರ ಕಾನಳ್ಳಿ, ಗ್ರಾ.ಪಂ ಸದಸ್ಯರಾದ ವಿನೋದ್ ನಾಯ್ಕ, ತಬರೇಜ್ ಖಾನ್, ವಿನಾಯಕ ನಾಯ್ಕ, ಗಜಾನನ ಉಪ್ಪಾರ, ಮಾರುತಿ ಉಪ್ಪಾರ ಮತ್ತಿತರರು ಉಪಸ್ಥಿತರಿದ್ದರು. ಕದಂಬ ಸೈನ್ಯದ ಜಿಲ್ಲಾ ಸಂಚಾಲಕ ಪುರಂದರ ನಾಯ್ಕ ಸ್ವಾಗತಿಸಿದರು. ಶಿಕ್ಷಕ ಆರ್.ಬಿ.ಶೆಟ್ಟಿ ನಿರೂಪಿಸಿ ವಂದಿಸಿದರು.
***