• Slide
  Slide
  Slide
  previous arrow
  next arrow
 • ಅಸಮರ್ಪಕ ಚತುಷ್ಪಥ ಕಾಮಗಾರಿ: ಐಆರ್‌ಬಿ ಅಧಿಕಾರಿ ತರಾಟೆಗೆ

  300x250 AD

  ಕುಮಟಾ: ತಾಲೂಕಿನ ಕಲಭಾಗ ಸರ್ಕಾರಿ ಶಾಲೆಯ ಆವರಣದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ್ ಚತುಷ್ಪಥದ ಅಸಮರ್ಪಕ ಕಾಮಗಾರಿಯ ಬಗ್ಗೆ ಐಆರ್‌ಬಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
  ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಸಾರ್ವಜನಿಕರ ಸಮಸ್ಯೆ ಆಲಿಸಿದರು. ಕಲಭಾಗ ಗ್ರಾಪಂ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ವಿರೂಪಾಕ್ಷ ನಾಯ್ಕ ಮತ್ತು ಮುಖಂಡ ಗಜು ನಾಯ್ಕ ಮಾತನಾಡಿ, ಅಳ್ವೆಕೋಡಿಯಲ್ಲಿ ಉಪ್ಪು ನೀರಿನ ಹಾವಳಿಯಿಂದ ಕೃಷಿ ಜಮೀನು ಬಂಜರಾಗಿದೆ. ಈ ಭಾಗದಲ್ಲಿ ಬೆಳೆಯುವ ಸಿಹಿ ಈರುಳ್ಳಿ, ಶೇಂಗಾ, ತರಕಾರಿ ಬೆಳೆಯುವ ರೈತರು ಕೃಷಿ ಕಾರ್ಯವನ್ನು ತೊರೆಯುವಂತಾಗಿದೆ. ಗಜನಿಯಲ್ಲಿ ಉಪ್ಪು ನೀರನ್ನು ನಿಲ್ಲಿಸುವುದರಿಂದ ಸ್ಥಳೀಯ ಬಾವಿಗಳ ನೀರು ಉಪ್ಪಾಗಿ, ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಬಂಡ್ ಮೇಲೆ ಅನಧಿಕೃತವಾಗಿ ಕಟ್ಟಡ ನಿರ್ಮಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ದೂರುಗಳು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರಕಿಸಿ ಕೊಡದಿದ್ದರೆ ಪಂಚಾಯತ್ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ವಿರೂಪಾಕ್ಷ ನಾಯ್ಕ ಎಚ್ಚರಿಸಿದರು.
  ಈ ಬಗ್ಗೆ ಪ್ರತಿಕ್ರಿಯಿಸಿದ ಸಮುದ್ರ ಕೊರೆತ ಉಪವಿಭಾಗದ ಅಧಿಕಾರಿ ದೇವರಾಜ ಆರ್, ಈ ಭಾಗದಲ್ಲಿ ಸಮುದ್ರ ಕೊರೆತ ತಪ್ಪಿಸಲು 5 ಕೋಟಿ ರೂ. ಕ್ರಿಯಾಯೋಜನೆ ಸಿದ್ಧಪಡಿಸಿ, ಇಲಾಖೆಗೆ ಕಳುಹಿಸಿದ್ದೇವೆ. ಕಾಮಗಾರಿ ಮಂಜೂರಿಯಾದರೆ, ಖಾರ್ಲ್ಯಾಂಡ್ ದುರಸ್ತಿ ಸೇರಿದಂತೆ ಉಪ್ಪು ನೀರು ನುಗ್ಗದಂತೆ ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು. ಈ ಭಾಗದಲ್ಲಿ ಸ್ಥಳ ಪರಿಶೀಲನೆ ನಡೆಸಿ, ಅಗತ್ಯವಾದ ತುರ್ತು ಕಾಮಗಾರಿ ಸೇರಿದಂತೆ ಅನಧಿಕೃತ ಕಾಮಗಾರಿಯನ್ನು ತೆರವುಗೊಳಿಸುವಂತೆ ಸಹಾಯಕ ಆಯುಕ್ತರು ಸೂಚಿಸಿದರು.
  ಮುಕ್ರಿ ಸಮಾಜದ ಪ್ರಮುಖರಾದ ಎನ್.ಆರ್.ಮುಕ್ರಿ ಮತ್ತು ಪಿ.ಜಿ.ಮುಕ್ರಿ ಮಾತನಾಡಿ, ಈ ಗ್ರಾಪಂ ವ್ಯಾಪ್ತಿಯಲ್ಲಿ ಮುಕ್ರಿ ಸಮಾಜದ ಬಹುತೇಕರು ಒಂದು ಅಥವಾ ಎರಡು ಗುಂಟೆ ಜಾಗದಲ್ಲಿ ವಾಸವಾಗಿದ್ದು, ಅವರಿಗೆ ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಅಲ್ಲದೇ ಆರ್‌ಟಿಸಿ ಕೂಡ ಅವರ ಹೆಸರಿಗೆ ಮಾಡಿಕೊಡಬೇಕೆಂದು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ಒದಗಿಸಿ ಕೊಡಬೇಕು. ಪಂಚಾಯತ್ ಅನುದಾನದಲ್ಲಿ ಮೀಸಲಿಟ್ಟ ಹಣದಲ್ಲಿ ರಸ್ತೆ ನಿರ್ಮಿಸಲು ಪಂಚಾಯತ್ ಮುಂದಾದರೆ, ತಡೆಯುವ ಕಾರ್ಯವಾಗುತ್ತಿದೆ. ದಾರಿ ವಿಚಾರದಲ್ಲಿ ವಿರೋಧಿಸುವುದು ಸರಿಯಲ್ಲ. ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ವಹಿಸಬೇಕು ಎಂದರು.
  ಇನ್ನು ಅಳ್ವೆಕೋಡಿಯಲ್ಲಿ ಐಆರ್‌ಬಿ ಕಾಮಗಾರಿಯಿಂದಾದ ಸಾಕಷ್ಟು ಅವಾಂತರಗಳ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿ ಎರಡು ಬದಿಯಲ್ಲಿ ಹೊಂಡ ತೆಗೆದು, ವಾರಗಟ್ಟಲೆ ಹಾಗೇ ಬಿಡುತ್ತಾರೆ. ಸೂಚನಾ ಫಲಕ ಕೂಡ ಅಳವಡಿಸುವುದಿಲ್ಲ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಒಂದು ವಾರದಲ್ಲಿ ನಾಲ್ಕು ಅಪಘಾತಗಳಾಗಿವೆ. ಅನೇಕರು ಗಾಯಗೊಂಡಿದ್ದಾರೆ. ಈ ಬಗ್ಗೆ ಐಆರ್‌ಬಿ ಅಧಿಕಾರಿಗಳಿಗೆ ತಿಳಿಸಿದರೂ ನಿರ್ಲಕ್ಷ್ಯ ವಹಿಸುತ್ತಾರೆ. ನೀರಿನ ಪೈಪ್‌ಗಳಿಗೆ ಹಾನಿ ಮಾಡಿದ್ದಾರೆ. ದುರಸ್ತಿ ಮಾಡದ ಕಾರಣ ಆ ಭಾಗದಲ್ಲಿ ನೀರಿನ ಪೂರೈಕೆ ನಿಂತುಹೋಗಿದೆ. ಜನರ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲದಂತಾಗಿದೆ ಎಂದು ಗ್ರಾಪಂ ಸದಸ್ಯರು ಆರೋಪಿಸಿದರು. ಕೆಲ ತುರ್ತು ಕಾಮಗಾರಿ ಕೈಗೊಂಡ ಗ್ರಾಪಂಗೆ ಇನ್ನು 70 ಸಾವಿರ ರೂ. ಬಿಲ್ ಪಾವತಿಸದೇ ಐಆರ್‌ಬಿ ಅಧಿಕಾರಿಗಳು ಸತಾಯಿಸುತ್ತಿರುವ ಬಗ್ಗೆ ಕಲಭಾಗ ಗ್ರಾಪಂ ಪಿಡಿಒ ಡಿ. ಪ್ರಜ್ಞಾ ಅವರು ಸಹಾಯಕ ಆಯುಕ್ತರ ಗಮನಕ್ಕೆ ತಂದರು. ಐಆರ್‌ಬಿ ಅಧಿಕಾರಿಯನ್ನು ಕರೆಯಿಸಿ ತರಾಟೆಗೆ ತೆಗೆದುಕೊಂಡ ಸಹಾಯಕ ಆಯುಕ್ತರು, ತಕ್ಷಣ ಸಾರ್ವಜನಿಕರ ಸಮಸ್ಯೆ ಸ್ಪಂದಿಸಿ, ತುರ್ತು ಕಾಮಗಾರಿಯನ್ನು ಕೈಗೊಳ್ಳುವಂತೆ ಸೂಚಿಸಿದರು.
  ಕೆಲ ಉದ್ಯಮಿಗಳು ಎಕರೆಗಳಷ್ಟು ಜಾಗ ಖರೀದಿಸಿ, ಅನಾದಿ ಕಾಲದಿಂದಿದ್ದ ಕಾಲುವೆ ಮುಚ್ಚಿದ್ದಾರೆ. ಇದರಿಂದ ಮಳೆ ನೀರು ಹರಿದು ಹೋಗಲು ತೊಡಕಾಗಿದೆ. ಸಿಆರ್‌ಝಡ್ ಪ್ರದೇಶದಲ್ಲಿ ಬಡವರಿಗೆ ಮನೆ ಕಟ್ಟಲು ಅವಕಾಶ ನೀಡದ ಅಧಿಕಾರಿಗಳು, ಉಳ್ಳವರು ಏನೇ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಸಿಆರ್‌ಝಡ್ ಪರವಾನಗಿ ಪಡೆಯದೇ ಕಂಪೌಂಡ್ ನಿರ್ಮಿಸಿದ್ದಾರೆ. ರೆಸಾರ್ಟ್ ಮಾಡುವ ಸಿದ್ದತೆ ನಡೆಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವವರು ಯಾರೆಂದು ಸ್ಥಳೀಯರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಲಭಾಗ ಗ್ರಾಪಂ ಪಿಡಿಒ ಡಿ. ಪ್ರಜ್ಞಾ ಮಾತನಾಡಿ, ಈ ಬಗ್ಗೆ ದೂರು ಬಂದಾಗ ಸ್ಥಳ ಪರಿಶೀಲನೆ ನಡೆಸಿದಾಗ, ಕಾಲುವೆ ಮುಚ್ಚಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ರಮಕ್ಕಾಗಿ ಮೇಲಾಧಿಕಾರಿ ಅವರಿಗೆ ಪತ್ರ ಬರೆದಿದ್ದೇವೆ. ಸಂಬಂಧಪಟ್ಟವರಿಗೂ ನೋಟಿಸ್ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
  ಈ ಸಂದರ್ಭದಲ್ಲಿ ಕಲಭಾಗ ಗ್ರಾಪಂ ವ್ಯಾಪ್ತಿಯಲ್ಲಿ ಅಗತ್ಯವಾಗಿ ಆಗಬೇಕಾದ ಕಾಮಗಾರಿಗಳ ವರದಿಯನ್ನು ಗ್ರಾಪಂ ಅಧ್ಯಕ್ಷೆ ಗೀತಾ ಕುಬಾಲ ಮತ್ತು ಉಪಾಧ್ಯಕ್ಷ ಮಂಜುನಾಥ ನಾಯ್ಕ ಅವರ ನೇತೃತ್ವದಲ್ಲಿ ಎಸಿ ಅವರಿಗೆ ಸಲ್ಲಿಸಲಾಯಿತು. ಅಲ್ಲದೇ ವಿವಿಧ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಯಿತು. ವೇದಿಕೆಯಲ್ಲಿ ಅಂಗನವಾಡಿ ಮಕ್ಕಳಿಂದ ಪ್ರದರ್ಶನಗೊಂಡ ಛದ್ಮವೇಷ ಗಮನ ಸೆಳೆಯಿತು. ಪುಟಾಣಿ ಜಾನವಿ ನಾಯ್ಕಳ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಬಳಿಕ ವಿವಿಧ ಇಲಾಖೆಗಳು ತಮ್ಮ ಯೋಜನೆಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ತಹಸೀಲ್ದಾರ್ ವಿವೇಕ ಶೇಣ್ವಿ, ಬಿಇಒ ರಾಜೇಂದ್ರ ಭಟ್, ಗ್ರಾಪಂ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top