ಕಾರವಾರ: ನಗರದ ಗಾಂಧಿ ಮಾರುಕಟ್ಟೆಯಲ್ಲಿರುವ ಹಾಲಿ ಎಲ್ಲಾ ಅಂಗಡಿಕಾರರು ಸ್ವ-ಖುಷಿಯಿಂದ ತಮ್ಮ ಅಂಗಡಿಗಳನ್ನು ಖಾಲಿ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದು ನಗರಸಭೆಯ ಅಧ್ಯಕ್ಷ ಡಾ.ನಿತಿನ್ ಪಿಕಳೆ ಕೋರಿದ್ದಾರೆ.
ಗಾಂಧಿ ಮಾರುಕಟ್ಟೆ ಪುರಾತನ ಮಾರುಕಟ್ಟೆಯಾಗಿದ್ದು, ಈಗ ಇದು ಶಿಥಿಲಾವಸ್ಥೆಯಲ್ಲಿದೆ. ಇದನ್ನು ಅರಿತು ನಗರಸಭೆಯು ಅದೇ ಜಾಗದಲ್ಲಿ ಅಮೃತ ನಗರೋತ್ಥಾನ ಯೋಜನೆಯಡಿ ಹೊಸದಾಗಿ ಪೂರ್ಣ ಪ್ರಮಾಣದಲ್ಲಿ ಸುಸಜ್ಜಿತ ಆಧುನಿಕವಾಗಿ ಹೊಸ ಮಳಿಗೆ ಸಂಕೀರ್ಣ ನಿರ್ಮಿಸಲು ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ನೂತನವಾಗಿ ಮಳಿಗೆ ಸಂಕೀರ್ಣ ನಿರ್ಮಾಣವಾದಲ್ಲಿ ಹೆಚ್ಚಿನ ನಾಗರೀಕರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಗಾಂಧಿ ಮಾರುಕಟ್ಟೆಯಲ್ಲಿ ಹಾಲಿ ಅಂಗಡಿಕಾರರು ವ್ಯಾಪಾರ ನಡೆಸುತ್ತಿದ್ದು, 2017ರಲ್ಲಿ ಆಧುನಿಕ ಮೀನು ಮಾರುಕಟ್ಟೆ ನಿರ್ಮಾಣ ಸಂದರ್ಭದಲ್ಲಿ 52 ಅಂಗಡಿಗಳನ್ನು ತೆರವು ಮಾಡಲಾಗಿತ್ತು ಹಾಗೂ ಮಳೆಗಾಲ ಪೂರ್ವದಲ್ಲಿ 13 ಅಂಗಡಿಗಳನ್ನು ಖುಲ್ಲಾಪಡಿಸಲಾಗಿತ್ತು. ಈ ಎಲ್ಲಾ ಅಂಗಡಿಕಾರರಿಗೆ ಸರಕಾರದ ನಿಯಮಾವಳಿಯಂತೆ ಹಾಲಿ ಅಂಗಡಿ ನಡೆಸುತ್ತಿರುವವವರಿಗೆ ಹೊಸ ಸಂಕೀರ್ಣದಲ್ಲಿ ಒಂದೊಂದು ಅಂಗಡಿ ಕಾಯ್ದಿರಿಸಲು ನ.17ರಂದು ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸದ್ಯ ಗಾಂಧಿ ಮಾರುಕಟ್ಟೆಯಲ್ಲಿರುವ ಪ್ರತಿ ಅಂಗಡಿಕಾರರು ನಗರಸಭೆಗೆ ಸಂದಾಯ ಮಾಡಲು ಬಾಕಿ ಇರುವ ಬಾಡಿಗೆ ಹಿಂಬಾಕಿ ಮೊತ್ತ ವ್ಯತ್ಯಾಸದ ರಖಂನ್ನು ಸಂದಾಯ ಮಾಡಬೇಕು. ಕಟ್-ಬಾಕಿದಾರರ ಹೆಸರನ್ನು ಪರಿಗಣಿಸಲಾಗುವುದಿಲ್ಲ. ಗಾಂಧಿ ಮಾರುಕಟ್ಟೆಯಲ್ಲಿ ಹಾಲಿ ಅಂಗಡಿ ನಡೆಸುತ್ತಿರುವವರ ಯಾದಿಯನ್ನು ನಗರಸಭೆ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು. ಈ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ನಗರಸಭೆಗೆ ಲಿಖಿತವಾಗಿ ದಾಖಲೆ ಸಹಿತ ಆಕ್ಷೇಪಣೆ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.