ಕುಮಟಾ: ತಾಲೂಕಿನ ಮಿರ್ಜಾನಿನ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ವಾರ್ಷಿಕ ಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಮಿರ್ಜಾನ್ ಶಾಖಾಮಠದ ಪೂಜ್ಯರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ಜ್ಯೋತಿ ಬೆಳಗಿಸಿ, ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಮುಖ್ಯ, ಸೋಲಿಗೆ ಕುಗ್ಗದೆ, ಗೆಲುವಿಗೆ ಹಿಗ್ಗದೆ ಸೋಲು-ಗೆಲುವನ್ನು ಕ್ರೀಡಾ ಮನೋಭಾವದಿಂದ ಸಮಾನವಾಗಿ ಸ್ವೀಕರಿಸಿ. ಸೋಲೇ ಗೆಲುವಿನ ಸೋಪಾನ ಎಂದು ಆಶೀರ್ವಚನ ನೀಡಿ, 2022-23ನೇ ಸಾಲಿನ ವಾರ್ಷಿಕ ಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಕುಮಟಾದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್. ಭಟ್ ಕ್ರೀಡಾಧ್ವಜಾರೋಹಣ ಮಾಡಿ, ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಕೇಂದೀಯ ವಿದ್ಯಾಲಯವನ್ನು ಸ್ಥಾಪಿಸಿ, ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆ ಜೊತೆಗೆ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಪ್ರೇರೇಪಿಸುತ್ತಿರುವುದು ಶ್ಲಾಘನೀಯ ಎಂದರು.
ಗಣ್ಯರು ಮತ್ತು ಶಾಲಾ ವಿದ್ಯಾರ್ಥಿ ಪ್ರತಿನಿಧಿಗಳು ಬಲೂನ್ ಗಳನ್ನು ಆಕಾಶದಲ್ಲಿ ಹಾರಿಸುವುದರ ಮೂಲಕ ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ವಾರ್ಷಿಕ ಶಾಲಾ ಕ್ರೀಡಾಕೂಟಕ್ಕೆ ಮೆರುಗು ಬಂದಿತು. ಕುಮಟಾ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ ಮತ್ತು ಕಳೆದರಡು ವರ್ಷಗಳ ಹಿಂದೆ ಕದಂಬ ಸಹೋದಯ ಕ್ರೀಡಾಕೂಟಗಳಲ್ಲಿ, ರಾಜ್ಯ ಮಟ್ಟದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ಟಸ್ಟ್ ಗಳಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಳುಗಳಾದ ಕುಮಾರಿ ಅಕ್ಷತಾ, ಅಕ್ಷಯ, ನಿಶ್ಚಿತಾ ಮತ್ತು ಸುಮಿತ್ ಕ್ರೀಡಾ ಜ್ಯೋತಿಯನ್ನು ಎತ್ತಿ ಹಿಡಿದು ಕ್ರೀಡಾಂಗಣದುದ್ದಕ್ಕೂ ಸಾಗುತ್ತಾ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಷ್ಟ್ರೀಯ ಕ್ರೀಡಾಪಟು ಕಾರ್ತಿಕ ಗಾಂವಕರ್ ಗೆ ಹಸ್ತಾಂತರಿಸಿದರು. ರಾಷ್ಟ್ರೀಯ ಕ್ರೀಡಾಪಟು ಕಾರ್ತಿಕ ಗಾಂವಕರ್ ತಮ್ಮ ಪ್ರೋತ್ಸಾಹದಾಯಕ ನುಡಿಗಳಿಂದ ಕ್ರೀಡಾಪಟುಗಳನ್ನು ಹುರಿದುಂಬಿಸಿದರು. ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಲೀನಾ ಎಂ. ಗೊನೇಹಳ್ಳಿಯವರು ವಿದ್ಯಾರ್ಥಿಗಳಿಗೆ ಕ್ರೀಡೆಯ ಮಹತ್ವದ ಬಗ್ಗೆ ಮಾತನಾಡಿದರು. ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ನ್ಯಾಯವಾದಿಗಳಾಗಿರುವ ಶ್ರೀಕುಮಾರ್, ಹಿರಿಯ ಶಿಕ್ಷಕರಾದ ಎಂ. ಜಿ. ಹಿರೇಕುಡಿ , ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕರಾದ ಬಾಲಕೃಷ್ಣ ನಾಯಕ ಮತ್ತು ನಾಗರತ್ನ ನಾಯಕರವರ ಮಾರ್ಗದರ್ಶನದ ಮೇರೆಗೆ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಶಿಕ್ಷಕ ರಮೇಶ ನಾಯ್ಕ ಕ್ರೀಡಾ ಜ್ಯೋತಿ ಮತ್ತು ಶಾಲೆಯ ನಾಲ್ಕು ಕ್ರೀಡಾ ತಂಡಗಳಾದ ಯುನಿಟಿ, ಪೀಸ್, ಸ್ಟ್ರೆಂಥ್ ಮತ್ತು ಕರೇಜ್’ಗಳ ಪಥಸಂಚಲನದ ಬಗ್ಗೆ ಮಾಹಿತಿ ನೀಡಿದರು.