ಕಾರವಾರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2023-24ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಒಂದು ತಿಂಗಳ ಕಾಲ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನ ಜರುಗಲಿದೆ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ತಿಳಿಸಿದ್ದಾರೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಸೂಚನೆಯಂತೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಈ ಅಭಿಯಾನ ಆಯೋಜಿಸಿದ್ದು, ಒಂದು ತಿಂಗಳ ಅವಧಿಗೆ ಮನೆ ಮನೆ ಜಾಥಾ ಕಾರ್ಯಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಪ್ರತಿಯೊಂದು ಮನೆಗೆ ಭೇಟಿ ನೀಡಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ದೊರೆಯುವ ಕೂಲಿ ಮೊತ್ತ, ಒಂದು ದಿನದ ಕೂಲಿ ಪಡೆಯಲು ಮಾಡಬೇಕಾದ ಕ್ರಮ, ಕೆಲಸದ ಪ್ರಮಾಣ ಮತ್ತು ಕೆಲಸದ ಅವಧಿ, ಯೋಜನೆಯಡಿ ದೊರೆಯುವ ಸೌಲಭ್ಯಗಳು ಮತ್ತು ಅರ್ಹತೆಗಳು, ಕಾಮಗಾರಿ ಪ್ರಮಾಣದಲ್ಲಿ ಹಿರಿಯ ನಾಗರೀಕರಿಗೆ ಮತ್ತು ವಿಶೇಷ ಚೇತನರಿಗೆ ಶೇ 50ರಷ್ಟು ರಿಯಾಯಿತಿ, ಕಾಮಗಾರಿ ಸ್ಥಳದಲ್ಲಿ ಒದಗಿಸಲಾಗುವ ಸೌಲಭ್ಯಗಳು, ಅಕುಶಲ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರುಗಳಿಗೆ ನಿರ್ವಹಿಸುವ ಕೆಲಸಕ್ಕೆ/ ಕೂಲಿ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಶೇ 20ರಷ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ಜೊತೆಗೆ ಮಹಿಳೆಯರ ಭಾಗವಹಿಸುವಿಕೆಯನ್ನು ಶೇ 60 ಹೆಚ್ಚಿಸುವುದು, ಜಲಸಂಜೀವಿನಿ ಕಾರ್ಯಕ್ರಮದಡಿ ವೈಜ್ಞಾನಿಕ ಯೋಜನಾ ವರದಿ ತಯಾರಿಕೆ, ಅನುಷ್ಠಾನದ ಮಹತ್ವ ಮತ್ತು ಅಗತ್ಯತೆಯ ಕುರಿತ ಪ್ರಮುಖ ಮಾಹಿತಿಯನ್ನು ಗ್ರಾಮಸ್ಥರಿಗೆ, ಹಿರಿಯ ನಾಗರಿಕರು, ಮಹಿಳೆಯರು, ದುರ್ಬಲ ವರ್ಗದವರು, ಲಿಂಗತ್ವ ಅಲ್ಪಸಂಖ್ಯಾತರು, ಸ್ವ-ಸಹಾಯ ಸಂಘಗಳ ಸದಸ್ಯರು ಹಾಗೂ ರೈತರಿಗೆ ತಿಳಿಸುವ ಹಾಗೂ ಕೆಲಸ ಮತ್ತು ಕಾಮಗಾರಿಯ ಬೇಡಿಕೆಯನ್ನು ಸಂಗ್ರಹಿಸುವ ಪ್ರಕ್ರಿಯೆ ಇದಾಗಿದೆ ಎಂದರು.
ಅಭಿಯಾನದಲ್ಲಿ ಭಾಗವಹಿಸುವವರು: ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲಾ ಸದಸ್ಯರು ಮತ್ತು ಪಂಚಾಯತಿ ಸಿಬ್ಬಂದಿಗಳು(ಗ್ರಾಮ ಕಾಯಕ ಮಿತ್ರ, ಮೇಟ್, ಬಿಎಫ್‌ಟಿ ಅವರನ್ನು ಒಳಗೊಂಡು) ಹಾಗೂ ಅನುಷ್ಠಾನ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಬೇಕು. ಜೊತೆಗೆ ತಮ್ಮ ವಾರ್ಡ್ಗಳ ಪ್ರತೀ ಮನೆಗೂ ಭೇಟಿ ನೀಡಿ ಯೋಜನೆಯ ಹಾಗೂ ಇತರೆ ಪ್ರಮುಖ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕಿದೆ.
ಜಲ ಸಂಜೀವಿನಿ ವಿಸ್ತೃತ ಯೋಜನಾ ವರದಿ ಸಿದ್ಧತೆ: ಮಹಾತ್ಮಗಾಂಧಿ ನರೇಗಾ ಯೋಜನೆಯಡಿಯಲ್ಲಿ ಜಲ ಸಂಜೀವಿನಿ ಜಲಾನಯನ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ವೈಜ್ಞಾನಿಕ ಆಧಾರದ ಮೇಲೆ ಜಿಯೋ-ಸ್ಪೇಷಿಯಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳನ್ನು ಒಳಗೊಂಡ ವಿವರವಾದ ವೈಜ್ಞಾನಿಕ ಯೋಜನಾ ವರದಿ ತಯಾರಿಕೆ ಹಾಗೂ ಕಾಮಗಾರಿಗಳನ್ನು ಅನುಷ್ಠಾನ ಮಾಡಬೇಕು. 2023-24 ನೇ ಸಾಲಿನಿಂದ ಈ ಕಾರ್ಯಕ್ರಮವನ್ನು ಕಡ್ಡಯವಾಗಿ ಪ್ರಾರಂಭಿಸಿ ವಾರ್ಷಿಕ ಕ್ರಿಯಾ ಯೋಜನೆಯ ಒಟ್ಟು ಅಂದಾಜು ವೆಚ್ಛದಲ್ಲಿ ಕನಿಷ್ಟ ಶೇ 65ರಷ್ಟನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳಿಗೆ ಕಡ್ಡಾಯವಾಗಿ ಮೀಸಲಿಡುವ ಮೂಲಕ ನೈಸರ್ಗಿಕ ಸಂರಕ್ಷಣೆಯ ಜೊತೆಗೆ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಮತ್ತು ಪರಿಸರ ಸಮತೋಲನವನ್ನು ಕಾಪಾಡುವ ಕಾರ್ಯಕ್ಕೆ ಮುಂದಾಗಬೇಕು.
ಗ್ರಾಮ ಪಂಚಾಯತಿ ಹಾಗೂ ಅನುಷ್ಠಾನ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳು ಕಡ್ಡಾಯವಾಗಿ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನ ಹಾಗೂ ಜಲ ಸಂಜೀವಿನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರ ಸಹಭಾಗಿತ್ವದೊಂದಿಗೆ ಸರಕಾರದ ನರೇಗಾದಂತಹ ಮಹತ್ವದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು.
• ಪ್ರಿಯಾಂಗಾ ಎಂ., ಸಿಇಒ