ಕುಮಟಾ: ತಾಲೂಕಿನ ಕಿಮಾನಿಯಲ್ಲಿ 19 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಖಾರ್‌ಲ್ಯಾಂಡ್ ಕಾಮಗಾರಿಗೆಯ ಶಂಕುಸ್ಥಾಪನೆಯನ್ನು ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ನೆರವೇರಿಸಿದರು.
ಕಿಮಾನಿ ಬಳಿ ಆಗಮಿಸಿದ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಬಿಜೆಪಿಗರು ಹೂಗುಚ್ಛ ನೀಡಿ ಸ್ವಾಗತಿಸಿದರು. ಅಲ್ಲಿಂದ ಆರಂಭವಾದ ಬೈಕ್ ರ‍್ಯಾಲಿಯು ಕಿಮಾನಿಯ ಖಾರ್‌ಲ್ಯಾಂಡ್ ಕಾಮಗಾರಿ ನಡೆಯುವ ಸ್ಥಳದಲ್ಲಿ ಸಮಾಪ್ತಿಗೊಂಡಿತು. ಬಳಿಕ ಸಚಿವರು ಖಾರ್‌ಲ್ಯಾಂಡ್ ಕಾಮಗಾರಿಗೆಯ ಭೂಮಿ ಪೂಜೆಯನ್ನು ನೆರವೇರಿಸಿ, ಸಭಾ ವೇದಿಕೆಗೆ ತೆರಳಿ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಸಚಿವರು, ಮನುಷ್ಯನ ಶ್ರೇಷ್ಠ ಸ್ಥಿತಿ ಎಂದರೆ ಸಮಾಧಾನ ಸ್ಥಿತಿಯಾಗಿದೆ. ಆ ನಿಟ್ಟಿನಲ್ಲಿ ಶ್ರೀಮಂತ ಮತ್ತು ಬಡವನ ನಡುವಿನ ಅಂತರ ಕಡಿಮೆ ಮಾಡಲು ಗ್ರಾಮೀಣ ಬದುಕು ಸುಧಾರಣೆಯಾಗಬೇಕು. ಗ್ರಾಮೀಣ ಉದ್ಯೋಗ ಮೂಲಗಳನ್ನು ಬಲಗೊಳಿಸುವ ಕಾರ್ಯ ಮಾಡಿದರೆ ಗ್ರಾಮೀಣಾಭಿವೃದ್ಧಿ ಸಾಧ್ಯ. ಹಾಗಾಗಿಯೇ ನದಿಯ ತೀರ ಪ್ರದೇಶದಲ್ಲಿ ಉಪ್ಪು ನೀರು ನುಗ್ಗಿ ಉಂಟಾಗುವ ತೊಂದರೆಯನ್ನು ಪರಿಹರಿಸಲು ಖಾರ್ಲ್ಯಾಂಡ್‌ನ್ನು ದುರಸ್ತಿ ಮಾಡುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.
ಜಿಲ್ಲೆಯ ಕರಾವಳಿಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ತಲಾ 500 ಕೋಟಿಯಂತೆ ಒಟ್ಟು 1500 ಕೋಟಿ ರೂ ಯೋಜನೆ ಸಿದ್ಧಪಡಿಸಿ, ಪ್ರತಿ ಕ್ಷೇತ್ರಕ್ಕೆ 300 ಕೋಟಿ ರೂ. ಬಿಡುಗಡೆ ಕೂಡ ಮಾಡಿದ್ದೇನೆ. ಇನ್ನು 250 ಕೋಟಿ ರೂ. ಆರ್ಥಿಕ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ದುರಸ್ತಿಯಿಂದ ಕೃಷಿ ಕಾರ್ಯಗಳಿಗೆ ಅನುಕೂಲವಾಗುತ್ತದೆ. ಕಟ್ಟುಗಳಲ್ಲಿ ಸಂಗ್ರಹವಾದ ನೀರನ್ನು ನೀರಾವರಿ ಸೌಲಭ್ಯಗಳ ಮೂಲಕ ರೈತರು ಬಳಸಿಕೊಳ್ಳಬಹುದು. ಅಲ್ಲದೇ ಸಿಗಡಿ ಕೃಷಿ ಮಾಡುವ ಮೂಲಕ ರೈತರು ಸ್ವಾವಲಂಬಿಯಾಗಿ ಬದುಕು ಸಾಗಿಸಲು ಸಹಾಯಕಾರಿಯಾಗುತ್ತದೆ. ಹಾಗಾಗಿ ಈ ಯೋಜನೆ ಫಲಪ್ರದವಾಗಲು ಮುಂದಿನ ಚುನಾವಣೆಯಲ್ಲಿ ದಿನಕರ ಶೆಟ್ಟಿ ಅವರನ್ನೇ ಶಾಸಕರಾಗಿ ಮುಂದುರಿಸುವ ಮೂಲಕ ಅವರನ್ನು ಬಲಪಡಿಸಬೇಕು ಎಂದ ಸಚಿವರು, ಈಗಾಗಲೇ ಜಿಲ್ಲೆಯ ಜ್ವಲಂತ ಸಮಸ್ಯೆಯಾದ ಇ-ಸ್ವತ್ತು ಸಮಸ್ಯೆಯನ್ನು ಪರಿಹರಿಸಿ ಆದೇಶ ಮಾಡಿದ್ದೇವೆ. ಸದ್ಯದಲ್ಲೆ ಅನುಷ್ಠಾನಕ್ಕೆ ತರಲಾಗುವುದು. ಗೋಮಾಳ ಜಾಗದಲ್ಲಾದ ಅತಿಕ್ರಮಣದಾರರಿಗೆ ಆ ಜಾಗ ಮಂಜೂರಿ ಮಾಡಲಾಗುವುದು. ಡಿಫಾರೆಸ್ಟ್ ಆಗಬೇಕಾದ ಸಾವಿರಾರು ಎಕರೆ ಪ್ರದೇಶವನ್ನು ಸರ್ಕಾರದ ಹೆಸರಿಗೆ ಮಾಡುವ ಮೂಲಕ ಪುನರ್ವಸತಿ ಕಲ್ಪಿಸಬೇಕಾದವರಿಗೆ ಜಾಗ ನೀಡಲು ಸಹಾಯಕಾರಿಯಾಗುತ್ತದೆ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ದಿ.ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಈ ಜಿಲ್ಲೆಯ ಕರಾವಳಿ ಭಾಗದಲ್ಲಿ ಖಾಲ್ಯಾಂಡ್ ನಿರ್ಮಿಸಲಾಗಿತ್ತು. ಇದರಿಂದ ಈ ಭಾಗದ ಮೀನುಗಾರರಿಗೆ, ರೈತರಿಗೆ ಅನುಕೂಲವಾಗಿತ್ತು. ಅದರ ನಂತರ ಈ ಖಾರ್ಲ್ಯಾಂಡ್‌ನ ರಿಪೇರಿ ಕೂಡ ಮಾಡಲು ಸಾಧ್ಯವಾಗಿಲ್ಲ. ಈಗಿನ ನಮ್ಮ ಸರ್ಕಾರ ಖಾಲ್ಯಾಂಡ್‌ನ ಅಭಿವೃದ್ಧಿಗೆ ಅನುದಾನ ನೀಡುವ ಮೂಲಕ ಮೀನುಗಾರರ, ರೈತರಿಗೆ ಅನುಕೂಲ ಮಾಡಿಕೊಡುವಂತಹ ಯೋಜನೆ ರೂಪಿಸಿದೆ. ಈಗ 100 ಕೋಟಿ ನೀಡಿದ ಸಚಿವರು ಮತ್ತೆ 75 ಕೋಟಿ ನೀಡುವ ಭರವಸೆ ನೀಡಿರುವುದು ಈ ಭಾಗದ ಜನರಿಗೆ ಸಚಿವರು ಮತ್ತು ನಮ್ಮ ಮುಖ್ಯಮಂತ್ರಿಯ ಮೇಲೆ ಅಭಿಮಾನ ಮೂಡುವಂತಾಗಿದೆ ಎಂದರು.
ಕಾರವಾರ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಪ್ರವಾಹ ಬಂದಾಗ, ಇನ್ನಿತರೆ ಸಂದರ್ಭದಲ್ಲಿ ಸಮಿಶ್ರ ಸರ್ಕಾರ ಇದ್ದಾಗ ಅನುದಾನ ದೊರೆಯದೇ ಜನರ ಪ್ರಶ್ನೆಗೆ ಉತ್ತರ ನೀಡಲು ಸಾಧ್ಯವಾಗದ ದುಃಸ್ಥಿತಿ ಇತ್ತು. ನಮ್ಮ ಸರ್ಕಾರ ಬಂದಮೇಲೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ ಎಂದರು.
ಈ ಸಂದರ್ಭದಲ್ಲಿ ಸಚಿವರನ್ನು ಶಾಸಕರು ಸನ್ಮಾನಿಸಿದರು. ಅಲ್ಲದೇ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ, ದೇವಗಿರಿ ಗ್ರಾಪಂ ಉಪಾಧ್ಯಕ್ಷ ಎಸ್.ಟಿ.ನಾಯ್ಕ, ಗುತ್ತಿಗೆದಾರರ ಸುಧೀರ ಪಂಡಿತ್ ಬರ್ಗಿ ಸೇರಿದಂತೆ ಇತರರು ಸಚಿವರನ್ನು ಗೌರವಿಸಿದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಯಕ್ಷಗಾನ ಶೈಲಿಯಲ್ಲಿ ಸಚಿವರು ಹಾಗೂ ಅತಿಥಿಗಳನ್ನು ಸ್ವಾಗತಿಸಲಾಯಿತು. ಅಲ್ಲದೇ ಚಂಡೆವಾದ್ಯ, ಭರತನಾಟ್ಯ ಸೇರಿಂದತೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಬರ್ಗಿ ಗ್ರಾ.ಪಂ ಅಧ್ಯಕ್ಷೆ ವಿಶಾಲಾಕ್ಷಿ ಪಟಗಾರ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಸಿ ಮೃತ್ಯಂಜಯ, ಮುಖ್ಯ ಅಭಿಯಂತರ ಪ್ರಕಾಶ ಶ್ರೀಹರಿ, ಅಭಿಯಂತರ ಅವಿನಾಶ್, ಅಧೀಕ್ಷಕ ಕೆ.ಸಿ.ಸತೀಶ, ತಹಶೀಲ್ದಾರ್ ವಿವೇಕ ಶೇಣ್ವಿ, ತಾ.ಪಂ ಇಒ ಮತ್ತು ಪ್ರೊಬೆಷನರಿ ಐಎಎಸ್ ಜುಬಿನ್ ಮೋಹಪಾತ್ರ ಇತರರು ಇದ್ದರು.