ಯಲ್ಲಾಪುರ : ಶಿರಸಿಯ ಗ್ರೀನ್ ಕೇರ್ ಸಂಸ್ಥೆ, ಯಲ್ಲಾಪುರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿರಸಿಯ ಶಗುನ್ ಮತ್ತು ಗೃಹ ವೈಭವ ಹಾಗೂ ಕೊಡಸೆಯ ಸೇಂಟ್ ಮೈಕಲ್ ಚರ್ಚ್ ಇವರ ಸಹಯೋಗದಲ್ಲಿ ನ. 13,ರವಿವಾರದಂದು ಕೊಡಸೆ ಗ್ರಾಮದ ಸಮುದಾಯ ಭವನದಲ್ಲಿ ಬುಡಕಟ್ಟು ಸಿದ್ದಿ ಸಮುದಾಯದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಕೊಡಸೆ ಚರ್ಚಿನ ಧರ್ಮ ಗುರುಗಳಾದ ಅಂತೋನಿ ಡಿಸೋಜಾ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಡಾ. ಶ್ಯಾಮ್ ಸುಂದರ್ ಆರೋಗ್ಯ ಮತ್ತು ಸ್ವಚ್ಛತೆ ಬಗ್ಗೆ ಮಾತನಾಡಿದರು. ಗ್ರಾಮದ ಹಿರಿಯರಾದ ಲಾರೆನ್ಸ್ ಸಿದ್ದಿ ಮತ್ತು ಪರ್ಸಿದ್ ಸಿದ್ದಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆಗಳನ್ನು ನಡೆಸಿ ಅಗತ್ಯವಿದ್ದವರಿಗೆ ಔಷಧಿಗಳನ್ನು ವಿತರಿಸಲಾಯಿತು. ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿಗಳಾದ ಜಿತೇಂದ್ರ ಕುಮಾರ್ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಂಸ್ಥೆಯ ನಿರ್ದೇಶಕರಾದ ಆಶಾ ಡಿಸೋಜಾರವರು ವಂದನಾರ್ಪಣೆಯನ್ನು ಮಾಡಿದರು. ಸಂಸ್ಥೆಯ ನಿರ್ದೇಶಕರುಗಳಾದ ರೋಹಿಣಿ ಮತ್ತು ವಿನುತಾರವರು ಭಾಗವಹಿಸಿದ್ದರು.
ಶಿರಸಿಯ ಪ್ರಸಿದ್ಧ ಗೃಹ ಉಪಯೋಗಿ ಮಳಿಗೆಗಳಾದ ಶಗುನ್ ಮತ್ತು ಗೃಹ ವೈಭವದವರು ಶಿಬಿರಕ್ಕೆ ಬೇಕಾಗಿರುವ ಔಷಧಿಗಳನ್ನು ಪೂರೈಸಿದರು.