ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಾದ ನಳಿನಿ ಶ್ರೀಹರನ್, ಅವರ ಪತಿ ಮತ್ತು ಇತರ ಮೂವರು ಅಪರಾಧಿಗಳನ್ನು ಶನಿವಾರ ಸಂಜೆ ತಮಿಳುನಾಡು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ನಳಿನಿ ಶ್ರೀಹರನ್ ಇಂದು ಸಂಜೆ ವೆಲ್ಲೂರಿನ ಮಹಿಳಾ ವಿಶೇಷ ಕಾರಾಗೃಹದಿಂದ ಬಿಡುಗಡೆಯಾದ ತಕ್ಷಣ ವೆಲ್ಲೂರು ಕೇಂದ್ರ ಕಾರಾಗೃಹಕ್ಕೆ ತೆರಳಿದರು. ಅಲ್ಲಿ ಪತಿ ವಿ ಶ್ರೀಹರನ್ ಅಲಿಯಾಸ್ ಮುರುಗನ್ ಬಿಡುಗಡೆಗೊಂಡಿದ್ದು, ಆತನನ್ನು ನೋಡಿ ಭಾವುಕರಾದರು. ಶ್ರೀಲಂಕಾದ ಪ್ರಜೆಗಳಾದ ಸಂತಾನ್ ಮತ್ತು ಮುರುಗನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿದ ನಂತರ ರಾಜ್ಯದ ತಿರುಚಿರಾಪಳ್ಳಿಯಲ್ಲಿರುವ ವಿಶೇಷ ನಿರಾಶ್ರಿತರ ಶಿಬಿರಕ್ಕೆ ಪೊಲೀಸ್ ವಾಹನದಲ್ಲಿ ಕರೆದೊಯ್ಯಲಾಯಿತು.
ಸುದೀರ್ಘ ಕಾನೂನು ಹೋರಾಟದ ನಂತರ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಕಳೆದ ಶುಕ್ರವಾರ ಆದೇಶ ನೀಡಿತ್ತು. ಅವಧಿಗೆ ಮೊದಲೇ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಕೋರಿ ರಾಜೀವ್ ಗಾಂಧಿ ಹಂತಕರು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಗೆ ತಮಿಳುನಾಡು ಸರ್ಕಾರ ಬೆಂಬಲ ನೀಡಿತ್ತು. ತಮ್ಮ ಸಹ ಅಪರಾಧಿ ಎಜಿ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಿದಂತೆ ತಮ್ಮನ್ನೂ ಬಿಡುಗಡೆ ಮಾಡುವಂತೆ ಕೋರಿ ನಳಿನಿ ಮತ್ತು ರವಿಚಂದ್ರನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ರಾಜೀವ್ ಗಾಂಧಿ ಹತ್ಯೆ ಪ್ರಕರಣ: ನಳಿನಿ ಶ್ರೀಹರನ್, ಇತರ ನಾಲ್ವರು ಅಪರಾಧಿಗಳು ಬಿಡುಗಡೆ
