ಕಾರವಾರ: ನೇರ ಪಾವತಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ವಾರದೊಳಗೆ ಕಾಯಂಗೊಳಿಸಲಾಗುವುದು. ಮುಖ್ಯಮಂತ್ರಿಗಳ ಅನುಮೋದನೆ ಪಡೆದು ಶೀಘ್ರದಲ್ಲೇ ಅಧಿಸೂಚನೆ ಪ್ರಕಟಿಸುವ ಸಾಧ್ಯತೆ ಇದೆ.
ಬಿಬಿಎಂಪಿ ಸೇರಿದಂತೆ ರಾಜ್ಯದ 302 ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಹಾಗೂ ನೇರ ವೇತನ ಪಾವತಿ ಅಡಿ ಕಾರ್ಯ ನಿರ್ವಹಿಸುತ್ತಿರುವ 40 ಸಾವಿರಕ್ಕೂ ಅಧಿಕ ಪೌರಕಾರ್ಮಿಕರನ್ನು ಮೂರು ಹಂತಗಳಲ್ಲಿ ಕಾಯಂಗೊಳಿಸಲು ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ ಬಿಬಿಎಂಪಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ರಾಜ್ಯದ ಇತರೆ 10 ಮಹಾನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 11,133 ಪೌರಕಾರ್ಮಿಕರನ್ನು ಖಾಯಂಗೊಳಿಸಲು ಸರ್ಕಾರ ತೀರ್ಮಾನಿಸಿದೆ.
ಕಾಯಂಗೊಳಿಸಲು ಅಡ್ಡಿಯಾಗಿದ್ದ ನೇಮಕಾತಿ ನಿಯಮವನ್ನು ಸಡಿಲಗೊಳಿಸಲು ಕರಡು ಅಧಿಸೂಚನೆ ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸಲಾಗಿದ್ದು, 81 ಆಕ್ಷೇಪಣೆ ಸಲ್ಲಿಕೆಯಾಗಿದ್ದವು. ಬಹುತೇಕ ಆಕ್ಷೇಪಣೆಗಳು ಗುತ್ತಿಗೆಯಡಿ ಕಾರ್ಯ ನಿರ್ವಹಿಸುತ್ತಿರುವ ಕಸ ವಿಲೇವಾರಿ ಮಾಡುವ ಆಟೋ ಚಾಲಕರು, ಸಹಾಯಕರನ್ನು ಕಾಯಂಗೊಳಿಸಬೇಕೆಂಬುದರ ಕುರಿತಾಗಿದ್ದವು. ಈ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗಿದೆ.
ಕಾಯಂ ಮಾಡಲು ನಿಯಮ ಸಡಿಲಿಕೆಗೆ ಸಂಬಂಧಿಸಿದ ಅಂತಿಮ ಅಧಿಸೂಚನೆಗೆ ಮುಖ್ಯಮಂತ್ರಿಗಳ ಅನುಮೋದನೆ ಬಾಕಿ ಇದ್ದು, ಸಿಎಂ ಅನುಮೋದನೆ ಪಡೆದು ಶೀಘ್ರದಲ್ಲಿ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.