ಶಿರಸಿ: ಉಡುಪಿ ಜಿಲ್ಲೆಯ ಅಜೆಕಾರಿನ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮೇಳನ ಸಮಿತಿ ನೀಡುವ ರಾಜ್ಯ ಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಶಿರಸಿಯ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ಹಾಗೂ ಚಿತ್ರದುರ್ಗದ ಶಮಾ ಭಾಗವತ್ ಆಯ್ಕೆ ಆಗಿದ್ದಾರೆ.
ಈ ವಿಷಯ ತಿಳಿಸಿದ ಸಮಿತಿ ರಾಜ್ಯ ಅಧ್ಯಕ್ಷ ಡಾ. ಶೇಖರ ಅಜೆಕಾರು, ಈ ಪ್ರಶಸ್ತಿಗೆ ಮುಂಬಯಿ ಸಹಿತ 33 ಮಕ್ಕಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ತುಳಸಿ ಹೆಗಡೆ ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಎಂಟನೇ ವರ್ಗದಲ್ಲಿ ಓದುತ್ತಿದ್ದು, ಯಕ್ಷನೃತ್ಯ ಮೂಲಕ ವಿಶ್ವಶಾಂತಿ ಸರಣಿ ಪ್ರಸ್ತುತಗೊಳಿಸುತ್ತಿರುವ ಬಾಲ ಕಲಾವಿದೆಯಾಗಿದ್ದಾಳೆ.
ಶಮಾ ಭಾಗವತ್ ಅವರು ಏಳನೇ ವರ್ಗದ ವಿದ್ಯಾರ್ಥಿನಿಯಾಗಿದ್ದು, ಮೂಲತಃ ಯಲ್ಲಾಪುರದ ನಂದೋಳ್ಳಿಯವರು. ಪ್ರಸ್ತುತ ಚಿತ್ರದುರ್ಗದಲ್ಲಿ ವಾಸವಿದ್ದು, ಸೆಲ್ಕೋದ ಮಂಜುನಾಥ ಭಾಗವತ್ ಹಾಗೂ ಭರತನಾಟ್ಯ ಗುರು ವಿದುಷಿ ಶ್ವೇತಾ ಭಟ್ ಕಾನಸೂರು ಅವರ ಪುತ್ರಿ. ಭರತನಾಟ್ಯ, ಸಂಗೀತ, ಕಥಕ್ ಕಲೆಯಲ್ಲಿ ಅನೇಕ ಸಾಧನೆ ಮಾಡಿದ ಶಮಾಗೆ ಈ ಪ್ರಶಸ್ತಿ ಅರಸಿ ಬಂದಿದೆ.