ಶಿರಸಿ: ಆರೋಗ್ಯ ಭಾರತಿ-ಕರ್ನಾಟಕ, ಶಿರಸಿ ವತಿಯಿಂದ ನ.13, ರವಿವಾರದಂದು ಬೆಳಿಗ್ಗೆ 10.30ಗಂಟೆಗೆ ‘ಧನ್ವಂತರಿ ಜಯಂತಿ’ ಹಾಗೂ ಡಾ.ಜಿ.ಬಿ. ನರಗುಂದ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ತಾಲೂಕಿನ ಜಾನ್ಮನೆಯ ಸಂಪಖಂಡ ಗ್ರೂಪ್ ಗ್ರಾಮಗಳ ಸಹಕಾರಿ ಸಂಘದ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಪುರಾಣದ ಅನುಸಾರ ಧನ್ವಂತರಿಯು ಆಯುರ್ವೇದ ದೇವರಾಗಿದ್ದು ಅನಾದಿಕಾಲದಿಂದಲೂ ಜನರು ಧನ್ವಂತರಿ ದೇವರು ಆರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥನೆ, ಹೋಮ-ಹವನಾದಿಗಳನ್ನು ಮಾಡುತ್ತಲೇ ಬಂದಿದ್ದಾರೆ. ಈ ಸದುದ್ದೇಶದಿಂದ ಲೋಕ ಕಲ್ಯಾಣಾರ್ಥವಾಗಿ ಸರ್ವರಿಗೂ ಆರೋಗ್ಯ ಭಾಗ್ಯ ಪ್ರಾಪ್ತಿಯಾಗಲಿ ಎಂಬ ಸದುದ್ದೇಶದಿಂದ ‘ಧನ್ವಂತರಿ ಜಯಂತಿ ಕಾರ್ಯಕ್ರಮ’ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದಂತಹ ಡಾ.ಜಿ.ಬಿ. ನರಗುಂದ ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗಜಾನನ ಪ್ರೌಢಶಾಲೆ, ಸಂಪಖಂಡದ ನಿವೃತ್ತ ಮುಖ್ಯೋಪಾಧ್ಯಾಯ ಜಿ.ಎಂ.ಹೆಗಡೆ ಹಾವಳಿಮನೆ ವಹಿಸಲಿದ್ದು, ಪ್ರಮುಖ ವಕ್ತಾರರಾಗಿ ಆರೋಗ್ಯ ಭಾರತಿ ಅಧ್ಯಕ್ಷ ಡಾ.ವಿನಾಯಕ ಹೆಬ್ಬಾರ್ ಆಗಮಿಸಲಿದ್ದಾರೆ.
ಸಾರ್ವಜನಿಕರು ಸಪರಿವಾರದೊಂದಿಗೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.