ಯಲ್ಲಾಪುರ: ಹಿಂದೂ ಅನ್ನುವ ಶಬ್ದ ಈ ದೇಶದ್ದೇ ಅಲ್ಲ ಅದೊಂದು ಪರ್ಷಿಯನ್ ಶಬ್ದ ಅದಕ್ಕೂ ನಮಗೂ ಸಂಬಂಧವೇ ಇಲ್ಲ, ಅಷ್ಟೇ ಅಲ್ಲ ಈ ಹಿಂದೂ ಶಬ್ದದ ಅರ್ಥವೇ ಅಶ್ಲೀಲವಾಗಿದೆ ಎಂಬ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ಖಂಡಿಸಿ ವಿವಿಧ ಹಿಂದೂ ಸಂಘಟನೆಯ ಪ್ರಮುಖರು ಶುಕ್ರವಾರ ತಹಶೀಲ್ದಾರ್ ಕಚೇರಿಗೆ ತೆರಳಿ ರಾಜ್ಯಪಾಲರಿಗೆ ಮನವಿ ರವಾನಿಸಿದರು.
ವಿವಿಧ ಹಿಂದೂ ಸಂಘಟನೆಯ ಮುಖಂಡರಾದ ರಾಮು ನಾಯ್ಕ, ಶ್ರೀನಿವಾಸ ಗಾಂವ್ಕರ, ವಿನೋದ ತಳೇಕರ, ಅಮೃತ ಬದ್ದಿ ಮುಂತಾದವರು ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಒಬ್ಬ ಹಿಂದೂವಾಗಿ ತನ್ನ ಧರ್ಮವನ್ನೇ ಸಾರ್ವಜನಿಕವಾಗಿ ಟೀಕಿಸುತ್ತಿರುವ ಖಂಡನಾರ್ಹವಾಗಿದೆ. ಬಹುಸಂಖ್ಯಾತ ಹಿಂದುಗಳನ್ನು ಟೀಕಿಸಿದರೆ, ತಾನೊಬ್ಬ ಮಹಾನ್ ವ್ಯಕ್ತಿಯಾಗಬಹುದು ಎನ್ನುವ ಭ್ರಮೆಯಲ್ಲಿದ್ದಾರೆ. ಅಂದಿನ ಪ್ರಧಾನಿ ಜವಾಹರಲಾಲ ನೆಹರು ಇದೇ ತಂತ್ರ ಉಪಯೋಗಿಸಿ ಹಿಂದೂಗಳನ್ನು ಟೀಕಿಸಿದ್ದರು ಈಗ ಜಾರಕಿಹೊಳಿ ಸಹಿತ ಇಡಿ ಕಾಂಗ್ರೆಸ್ ನೆಹರು ಸಂತತಿಯವರನ್ನು ಮೆಚ್ಚಿಸಲು ಹೊರಟಿದ್ದಾರೆ.
ಹಿಂದೂ ಅನ್ನುವ ಶಬ್ದ ಅಸಹ್ಯವಾಗುತ್ತದೆ ಎಂದು ಸಾರ್ವಜನಿಕವಾಗಿ ಭಾಷಣ ಮಾಡಿರುವ ಸತೀಶ್ ಜಾರಕಿಹೊಳಿಯವರಿಗೆ ಇಡೀ ಹಿಂದೂ ಸಮಾಜ ಪಕ್ಷಾತೀತವಾಗಿ ಅಂತವರಿಗೆ ಛೀಮಾರಿ ಹಾಕಬೇಕು. ಸಮಾಜದಲ್ಲಿ ಕೋಮು ದ್ವೇಷವನ್ನು ಹುಟ್ಟು ಹಾಕುತ್ತಿರುವ ಹಾಗೂ ಧಾರ್ಮಿಕ ಅರಾಜಕತೆಯನ್ನು ಸೃಷ್ಟಿಸುತ್ತಿರುವ ಆರೋಪದ ಮೇಲೆ ಈ ವ್ಯಕ್ತಿಯ ಶಾಸಕ ಸ್ಥಾನವನ್ನು ರದ್ದುಪಡಿಸಲು ಹಾಗೂ ತಕ್ಷಣ ಬಂಧನಕ್ಕೆ ಒಳಪಡಿಸುವಂತೆ ರಾಜ್ಯಪಾಲರಲ್ಲಿ ಕೋರಿದ್ದಾರೆ.
ಸತೀಶ್ ಜಾರಕಿಹೊಳಿಯವರ ಈ ಹೇಳಿಕೆಯಿಂದ ಹಿಂದೂ ಧರ್ಮದ ಅನುಯಾಯಿಗಳಾದ ನಮಗೆ ತೀವ್ರ ನೋವಾಗಿದೆ. ನಮ್ಮ ಧರ್ಮ ಅಭಿಮಾನಕ್ಕೆ ಧಕ್ಕೆಯಾಗಿದೆ. ಕೆಲವೇ ತಿಂಗಳುಗಳ ಹಿಂದೆ ದೇಶದ ಅಲ್ಪಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ ಶರ್ಮಾರನ್ನು ತಕ್ಷಣ ಪಕ್ಷದ ಹುದ್ದೆಯಿಂದ ಕೈ ಬಿಡಲಾಗಿತ್ತು. ಈಗ ಅದೇ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರೇ ದೇಶದ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ನೋವಾಗುವಂತೆ ಮಾತನಾಡಿದ್ದಾರೆ. ರಾಜ್ಯ ಚುನಾವಣೆಯ ಹೊಸ್ತಿಲಲ್ಲಿ ಇರುವ ಸಂದರ್ಭದಲ್ಲಿ ಇಂತಹ ಪ್ರಚೋದನಕಾರಿ ಹೇಳಿಕೆಗಳ ಮೂಲಕ ಕರ್ನಾಟಕದಲ್ಲಿ ಕೋಮು ಗಲಭೆ, ದಂಗೆ, ಅಲ್ಪಸಂಖ್ಯಾತರಲ್ಲಿ ಭಯ, ಅಭದ್ರತೆ ಹಾಗೂ ರಾಜಕೀಯ ಅಸ್ಥಿರತೆಯನ್ನು ಹುಟ್ಟು ಹಾಕಲು ಯತ್ನಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ತಕ್ಷಣ ನಿಷೇಧ ಮಾಡುವ ಬಗ್ಗೆ ಚುನಾವಣಾ ಆಯೋಗ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.