ಮುಂಡಗೋಡ: ಜಿಲ್ಲಾಮಟ್ಟದ ಭಕ್ತ ಕನಕದಾಸ ಜಯಂತಿ ಹಾಗೂ ವೀರರಾಣಿ ಒನಕೆ ಓಬವ್ವ ಜಯಂತಿಯನ್ನು ತಾಲೂಕ ಆಡಳಿತದ ಸೌಧದ ಹತ್ತಿರ ಇರುವ ಕನಕಪೀಠ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಮಿಕ ಸಚಿವ ಹಾಗೂ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಭಕ್ತ ಕನಕದಾಸರು ಇಡೀ ಮಾನವ ಕುಲಕ್ಕೆ ಆದರ್ಶ. ಸಮಾಜಕ್ಕೆ ಹೊಸ ಹೊಸ ಆದರ್ಶ ನೀಡಿರತಕ್ಕಂತ ಕನಕದಾಸರ ಜಯಂತಿಯನ್ನು ಇಡೀ ರಾಜ್ಯ ಕನಕದಾಸ ಜಯಂತಿಯನ್ನು ಆಚರಣೆ ಮಾಡುತ್ತಿದೆ ಎಂದರು.
ಮಾಜಿ ಶಾಸಕ ವಿ.ಎಸ್.ಪಾಟೀಲ ಮಾತನಾಡಿ ನಮ್ಮ ಮಕ್ಕಳಿಗೆ ನಮ್ಮ ದೇಶ, ಸಂಸ್ಕೃತಿ ಬಗ್ಗೆ ಆದರ್ಶ ಪುರುಷರ ಕಥೆಗಳನ್ನು ಹೇಳುವಂತ ಕಾರ್ಯಗಳು ಆಗಬೇಕು ಎಂದರು.
ತಹಶೀಲ್ದಾರ ಶಂಕರ ಗೌಡಿ ಸ್ವಾಗತವನ್ನು ಮಾಡಿ ಪ್ರಸ್ತಾವಿಕವಾಗಿ ನುಡಿದರು.ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ. ಅನುಪಮ ವೀರರಾಣಿ ಒನಕೆ ಓಬವ್ವ ಕುರಿತು ಮಾಹಿತಿ ನೀಡಿದರೆ ಪದವಿ ಪೂರ್ವ ಕಾಲೇಜ್ ಉಪನ್ಯಾಸಕ ಗಂಗಾಧರ ನಾಯಕ್ ಭಕ್ತಕನಕದಾಸರ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಶಿರಸಿ ಉಪವಿಭಾಗಧಿಕಾರಿ(ಕಂದಾಯ) ದೇವರಾಜ, ಸಿಪಿಐ ಎಸ್.ಎಸ್.ಸಿಮಾನಿ, ಪ.ಪಂ ಉಪಾಧ್ಯಕ್ಷ ಶ್ರೀಕಾಂತ ಸಾನು, ಜಿ.ಪಂ ಮಾಜಿ ಸದಸ್ಯ ರವೀಂದ್ರಗೌಡ ಪಾಟೀಲ, ನಾಗರಾಜ ಗುಬ್ಬಕ್ಕನವರ, ಬಸಯ್ಯ ನಡುವಿನಮನಿ, ಸೇರಿದಂತೆ ಕುರುಬ ಸಮಾಜದ ಗಣ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.